August 8, 2026
Saturday, August 8, 2026
spot_img

ಸಾಮಾಜಿಕ ನ್ಯಾಯ, ಜಾತಿವಾರು ಲೆಕ್ಕಾಚಾರದಿಂದ ನನಗೆ ಸಚಿವ ಸ್ಥಾನ ಸಿಕ್ಕಿದೆ: ಕೆ.ಎಸ್.ಬಸವಂತಪ್ಪ

ಹೊಸದಿಗಂತ ವರದಿ ದಾವಣಗೆರೆ:

ಸಚಿವರಾಗಬೇಕೆಂಬ ಆಸೆ ಪ್ರತಿಯೊಬ್ಬ ಶಾಸಕರಿಗೂ ಇರುತ್ತದೆ. ಆದರೆ ನಮ್ಮ ಪಕ್ಷದ ವರಿಷ್ಠರು ಸಾಮಾಜಿಕ ನ್ಯಾಯ ಹಾಗೂ ಜಾತಿವಾರು ಸಚಿವ ಸ್ಥಾನ ನೀಡಿದ್ದಾರೆ. ಹೀಗಾಗಿ ನನಗೆ ಅವಕಾಶ ಸಿಕ್ಕಿದೆ ಎಂದು ನೂತನ ಸಚಿವ ಕೆ.ಎಸ್.ಬಸವಂತಪ್ಪ ಹೇಳಿದರು.

ತಾಲೂಕಿನ ಆನಗೋಡು ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಆಕಾಂಕ್ಷಿಗಳಾಗಿದ್ದ ಶಾಸಕರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮಾಧಾನ ಪಡಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಕನಸಿನಂತೆ ಯುವಕರಿಗೆ ಹಾಗೂ ಸಾಮಾನ್ಯ ಕುಟುಂಬದ ಹಿನ್ನೆಲೆಯುಳ್ಳವರಿಗೆ ಅವಕಾಶ ಸಿಕ್ಕಿರುವುದು ಕ್ಷೇತ್ರದ ಜನತೆ ನೀಡಿದ ಆಶೀರ್ವಾದ ಕಾರಣವಾಗಿದೆ. ಮುಖ್ಯಮಂತ್ರಿಗಳು ಯಾವುದೇ ಖಾತೆ ನೀಡಿದರೂ, ಅದನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಪೌರಕಾರ್ಮಿಕರ ಮಗನಿಗೆ ಸಚಿವ ಸ್ಥಾನ ನೀಡಿ ಗೌರವಿಸಿರುವುದು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಸಿದ್ಧಾಂತಕ್ಕೆ ಸಾಕ್ಷಿಯಾಗಿದೆ. ಸಚಿವನಾಗಿ ಪ್ರಥಮ ಬಾರಿಗೆ ನನ್ನ ಕ್ಷೇತ್ರಕ್ಕೆ ಬಂದು ಮತದಾರರ ಹಾಗೂ ಕ್ಷೇತ್ರದ ಜನರ ಆಶೀರ್ವಾದ ಪಡೆದಿದ್ದೇನೆ. ಕ್ಷೇತ್ರದಲ್ಲಿ ಮಳೆಯಿಂದ ಆಗಿರುವ ಬೆಳೆ ಹಾನಿ ಹಾಗೂ ರೈತರ ಸಮಸ್ಯೆಗಳನ್ನು ಖುದ್ದಾಗಿ ಪರಿಶೀಲಿಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ಮುಖ್ಯಮಂತ್ರಿಗಳು ನಮಗೆ ವಹಿಸಿದ್ದಾರೆ. ಶೀಘ್ರದಲ್ಲೇ ತಾಲೂಕಿನಾದ್ಯಂತ ಪ್ರವಾಸ ಕೈಗೊಂಡು, ರೈತರಿಗೆ ಸೂಕ್ತ ಪರಿಹಾರ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ:

22 ಕೆರೆ ತುಂಬಿಸುವ ಯೋಜನೆ ಅಂತಿಮ ಹಂತಕ್ಕೆ ಬಂದಿದ್ದು, ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಈ ಹಿಂದೆ ಕಳಪೆ ಕಾಮಗಾರಿಯಿಂದಾಗಿ ಪೈಪ್‌ಲೈನ್ ಹಾಳಾಗಿ ಕೋಟ್ಯಂತರ ರೂಪಾಯಿ ವ್ಯರ್ಥವಾಗಿತ್ತು. ಶೀಘ್ರದಲ್ಲೇ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ, ಈ ಯೋಜನೆಯನ್ನು ಪೂರ್ಣಗೊಳಿಸಲಾಗುವುದು. ಕ್ಷೇತ್ರದ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಜೊತೆಗೂಡಿ ಕೆಲಸ ಮಾಡುತ್ತೇನೆ. ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವುದು ಹಾಗೂ ಅತ್ಯಾಧುನಿಕ ಹೈಟೆಕ್ ಆಸ್ಪತ್ರೆ ನಿರ್ಮಾಣಕ್ಕೂ ಶ್ರಮಿಸುತ್ತೇನೆ ಎಂದು ಅವರು ಭರವಸೆ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !