August 9, 2026
Sunday, August 9, 2026
spot_img

Gen Z ಯುವಜನತೆಯ ಭವಿಷ್ಯಕ್ಕಾಗಿ ಸಚಿವ ಸ್ಥಾನ ತ್ಯಜಿಸಿದೆ: ಧರ್ಮೇಂದ್ರ ಪ್ರಧಾನ್ ಭಾವುಕ ನುಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ನೀಟ್ ಪೇಪರ್ ಲೀಕ್ ಹಗರಣ ಹಾಗೂ ವಿದ್ಯಾರ್ಥಿಗಳ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ಬಿಜೆಪಿ ನಾಯಕ ಧರ್ಮೇಂದ್ರ ಪ್ರಧಾನ್, ತಮ್ಮ ನಿರ್ಧಾರದ ಹಿಂದಿನ ಅಸಲಿ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಒಡಿಶಾದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರತಿಭಟನೆಯ ಸಂದರ್ಭದಲ್ಲಿ ದೇಶದ ಯುವ ಪೀಳಿಗೆಯನ್ನು (Gen Z) ದಾರಿ ತಪ್ಪಿಸಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತ ಸಂಚು ರೂಪಿಸಿದ್ದವು ಎಂದು ತಿಳಿಸಿದರು. ದೇಶದ ಯುವಕರ ಭವಿಷ್ಯ ಮತ್ತು ಶೈಕ್ಷಣಿಕ ಹಿತದೃಷ್ಟಿಯಿಂದ ತಾವು ಮೌನ ಮುರಿದು, ಸಚಿವ ಸ್ಥಾನ ತೊರೆಯಲು ನಿರ್ಧರಿಸಿದ್ದಾಗಿ ಪ್ರಕಟಿಸಿದರು.

‘ವಿಶ್ವಗುರು’ ಭಾರತ ನಿರ್ಮಾಣವೇ ಮುಖ್ಯ ಗುರಿ

ತಮ್ಮ ರಾಜೀನಾಮೆ ಕುರಿತು ಭಾವುಕರಾಗಿ ಮಾತನಾಡಿದ ಧರ್ಮೇಂದ್ರ ಪ್ರಧಾನ್, “ದೇಶದ ಯುವ ಪೀಳಿಗೆ ನಮ್ಮ ಮಕ್ಕಳು. ನನಗೆ ವೈಯಕ್ತಿಕವಾಗಿ ಯಾವುದೇ ಅಧಿಕಾರದ ಹಪಹಪಿತನವಿಲ್ಲ. ಭಾರತದಲ್ಲಿ ಪ್ರತಿ ವರ್ಷ ಕನಿಷ್ಠ 2 ಕೋಟಿ ಮಕ್ಕಳು ಜನಿಸುತ್ತಿದ್ದು, ಕಳೆದ 10 ವರ್ಷಗಳಲ್ಲಿ 20 ಕೋಟಿಗೂ ಅಧಿಕ ಯುವ ಜನಾಂಗ ಸೃಷ್ಟಿಯಾಗಿದೆ. ಭಾರತವನ್ನು ‘ವಿಶ್ವಗುರು’ ಮಾಡುವ ಮಹದಾಸೆ ಮತ್ತು ಸಾಮರ್ಥ್ಯ ಈ ಯುವಜನತೆಯಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಸಚಿವ ಸ್ಥಾನ ನನಗೇನು ಮುಖ್ಯವಾಗಿರಲಿಲ್ಲ” ಎಂದರು. ಜುಲೈ 25 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ತೀವ್ರಗೊಂಡಾಗ, ಪರಿಸ್ಥಿತಿಯ ಗಂಭೀರತೆಯನ್ನು ಗ್ರಹಿಸಿ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜೀನಾಮೆ ಸಲ್ಲಿಸಿದ್ದಾಗಿ ವಿವರಣೆ ನೀಡಿದರು.

ರಾಜಕೀಯ ಟೀಕೆಗಳಿಗೆ ತಿರುಗೇಟು

ಇದೇ ವೇಳೆ ಒಡಿಶಾದ ಮಾಜಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಹಾಗೂ BJD ಕಾರ್ಯಕರ್ತರ ಕಪ್ಪು ಬಾವುಟ ಪ್ರದರ್ಶನಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ರೈತನ ಮಗ. ಜನಸೇವೆಯೇ ನನ್ನ ಮುಖ್ಯ ಆದ್ಯತೆ. ಒಡಿಶಾದ ಕೀರ್ತಿಗೆ ಧಕ್ಕೆ ತರುವ ಯಾವುದೇ ಕೆಲಸವನ್ನು ನಾನು ಮಾಡಿಲ್ಲ ಮತ್ತು ಜನರ ಸೇವೆಗಾಗಿ ಮತ್ತೆ ಮರಳಿ ಬರುತ್ತೇನೆ” ಎಂದು ಧನಾತ್ಮಕವಾಗಿ ತಿರುಗೇಟು ನೀಡಿದರು. ಇನ್ನೊಂದೆಡೆ BJD ನಾಯಕರು ಈ ರಾಜೀನಾಮೆಯನ್ನು ವಿದ್ಯಾರ್ಥಿಗಳ ಒತ್ತಡದ ಫಲಿತಾಂಶ ಎಂದು ವ್ಯಾಖ್ಯಾನಿಸಿದ್ದರೂ, ಪ್ರಧಾನ್ ಅವರು ಯುವಜನತೆಯ ಸಬಲೀಕರಣ ಹಾಗೂ ಪಾರದರ್ಶಕ ಆಡಳಿತಕ್ಕೆ ತಮ್ಮ ಬದ್ಧತೆಯನ್ನು ಎತ್ತಿಹಿಡಿದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !