October 14, 2026
Wednesday, October 14, 2026
spot_img

ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ: ವಿಜಯಪುರದಲ್ಲಿ ಹತ್ತಿ, ತೊಗರಿ ಬೆಳೆ ಹಾನಿ ಪರಿಶೀಲಿಸಿದ ಎಂ.ಬಿ. ಪಾಟೀಲ್!

ಹೊಸದಿಗಂತ ವಿಜಯಪುರ:

ಜಿಲ್ಲೆಯಲ್ಲಿ ಎದುರಾಗಿರುವ ಬರ ಪರಿಸ್ಥಿತಿ ಹಿನ್ನೆಲೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಭಾನುವಾರ ವಿವಿಧೆಡೆ ಭೇಟಿ ನೀಡಿ
ಬೆಳೆ ಹಾನಿ ಪರಿಶೀಲಿಸಿದರು.

ನಗರ ಹೊರ ವಲಯ ಹಿಟ್ಟಿನಹಳ್ಳಿ ವ್ಯಾಪ್ತಿಯ ರೈತರ ಜಮೀನಿಗೆ ತೆರಳಿ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಪ್ರಸ್ತುತ ಸ್ಥಿತಿಯನ್ನು ಅವಲೋಕಿಸಿದರು.
​ಮಳೆ ಅಭಾವದಿಂದಾಗಿ ಬೆಳೆಗಳ ಬೆಳವಣಿಗೆ ಕುಂಠಿತಗೊಂಡು ಬಿತ್ತನೆ ಮಾಡಿದ ಪೈರು ಒಣಗುತ್ತಿರುವುದನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದ ಸಚಿವರು, ಸ್ಥಳದಲ್ಲಿದ್ದ ರೈತರು ಹಾಗೂ ಕೃಷಿ ಅಧಿಕಾರಿಗಳಿಂದ ಬೆಳೆ ಹಾನಿ ಸಮಗ್ರ ಮಾಹಿತಿ ಪಡೆದುಕೊಂಡರು.

ಇದೇ ಸಂದರ್ಭ ರೈತರ ಅಹವಾಲುಗಳನ್ನು ಆಲಿಸಿದ ಸಚಿವರು, ಜಿಲ್ಲೆಯಾದ್ಯಂತ ಭೇಟಿ ನೀಡಿ ಮಳೆ ಹಾಗೂ ಬೆಳೆ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

ಜಿಲ್ಲೆಯಾದ್ಯಂತ ಸುದೀರ್ಘ ವೀಕ್ಷಣೆ ನಡೆಸಿ ಪೂರ್ಣಪ್ರಮಾಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ವರದಿ ಸಲ್ಲಿಕೆಯಾದ ತಕ್ಷಣ ಸರ್ಕಾರವು ಸೂಕ್ತ ನಿರ್ಧಾರ ಕೈಗೊಂಡು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳಲಿದೆ. ರೈತರ ಪ್ರತಿಯೊಂದು ಸಂಕಷ್ಟಕ್ಕೂ ಸರ್ಕಾರವು ಅತ್ಯಂತ ಸಕಾರಾತ್ಮಕವಾಗಿ ಸ್ಪಂದಿಸಿ, ಅವರ ಹಿತರಕ್ಷಣೆಗೆ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.

ನಂತರ ಮದಭಾವಿ ಗ್ರಾಮಕ್ಕೆ ತೆರಳಿ ತೊಗರಿ ಹಾಗೂ ಹತ್ತಿ ಬೆಳೆಗಳ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಜಿಲ್ಲಾಧಿಕಾರಿ ಡಾ. ಆನಂದ ಕೆ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಸಿದ್ದರಾಮ ಬರಗಿಮಠ ಸೇರಿದಂತೆ ಇತರರು ಇದ್ದರು.

Must Read