August 9, 2026
Sunday, August 9, 2026
spot_img

ಸಾರ್ವಜನಿಕರ ಸಮಸ್ಯೆಗೆ ನಿರ್ಲಕ್ಷ್ಯ ಬೇಡ: ಹೊಳಲ್ಕೆರೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಟಿ.ರಘುಮೂರ್ತಿ ಸೂಚನೆ

ಹೊಸದಿಗಂತ ವರದಿ ಚಿತ್ರದುರ್ಗ:

ಹೊಳಲ್ಕೆರೆ ತಾಲೂಕಿನಲ್ಲಿ ಕುಡಿಯುವ ನೀರು, ಉದ್ಯೋಗ ಹಾಗೂ ದನಕರುಗಳ ಮೇವಿನ ಸಮಸ್ಯೆಯಾಗದಂತೆ ಸಕಾಲದಲ್ಲಿ ಸ್ಪಂದಿಸಬೇಕು. ಯಾವುದೇ ದೂರುಗಳು ಬಾರದಂತೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳ ಉಸ್ತುವಾರಿ ಸಚಿವ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹೊಳಲ್ಕೆರೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರಕೃತಿ ವಿಕೋಪ ನಿರ್ವಹಣಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಬೇಕು. ಕೊಳವೆ ಬಾವಿ ಕೊರೆಸಿದರೂ ವಿದ್ಯುತ್ ಸಂಪರ್ಕ ಸಿಗದೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬರಬಾರದು. ತುರ್ತು ಸಂದರ್ಭಗಳಲ್ಲಿ ನಿಯಮಗಳ ನೆಪ ಹೇಳದೆ ತಕ್ಷಣವೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಕೆಗೆ ಸೂಚನೆ

ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಾಗ ಯಾವುದೇ ಕಾರಣಕ್ಕೂ ಮಿತಿ ಹೇರಬೇಡಿ. ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸಿ. ಆದರೆ ಲೆಕ್ಕಪತ್ರಗಳನ್ನು ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಬೇಕು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ವಾಣಿವಿಲಾಸ ಜಲಾಶಯದಿಂದ ಹೊಳಲ್ಕೆರೆ ತಾಲ್ಲೂಕಿನ ನೂರಾರು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ  367ಕೋಟಿ ರೂ.  ವೆಚ್ಚದ ಬೃಹತ್ ಯೋಜನೆ ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು. ಸೆಪ್ಟೆಂಬರ್ 30 ರೊಳಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಳಿಸಿದರೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಯೋಜನೆ ಲೋಕಾರ್ಪಣೆಗೊಳಿಸೋಣ ಎಂದು ಸಚಿವರು ತಿಳಿಸಿದರು.

ವಿಬಿ-ಜಿ ರಾಮ್ ಜಿ ಯೋಜನೆಯಡಿ ಪ್ರತಿಯೊಂದು ಪಂಚಾಯಿತಿಯಲ್ಲೂ ಸಾರ್ವಜನಿಕರಿಗೆ ಕೆಲಸ ಲಭ್ಯವಿರುವ ಬಗ್ಗೆ ಜಾಗೃತಿ ಮೂಡಿಸಬೇಕು. ಕೂಲಿ ಅರಸಿ ಬರುವ ಪ್ರತಿಯೊಬ್ಬರಿಗೂ ಕೆಲಸ ನೀಡಬೇಕು. ಗ್ರಾಮಸ್ಥರಿಗೆ ಯಾವುದೇ ರೀತಿಯ ಅಭಾವ ಎದುರಾಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಬೋರ್‌ವೆಲ್ ಹಳೆಯ ಬಾಕಿ ಬಿಲ್ ಶೀಘ್ರ ಪಾವತಿಸಿ:

ಜಿಲ್ಲೆಯಲ್ಲಿ ಕೈಗೊಂಡಿರುವ ಕುಡಿಯುವ ನೀರಿನ ಕಾಮಗಾರಿಗಳ ಹಳೆಯ ಬಾಕಿ ಬಿಲ್ ಹಾಗೂ ಬೋರ‍್ವೆಲ್ ಕೊರೆದ ಸಂಸ್ಥೆಗಳಿಗೆ ನೀಡಬೇಕಾದ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಹಲವು ವರ್ಷಗಳಿಂದ ಬೋರ‍್ವೆಲ್ ಕೊರೆದ ಸಂಸ್ಥೆಗಳಿಗೆ ಹಾಗೂ ಕಾಮಗಾರಿ ನಡೆಸಿದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿಯಾಗದಿರುವ ದೂರುಗಳಿವೆ. ಟಾಸ್ಕ್ ಫೋರ್ಸ್ ಹಾಗೂ ಸರ್ಕಾರದಿಂದ ಬಿಡುಗಡೆಯಾಗುವ ಹೊಸ ಅನುದಾನದಲ್ಲಿ ಹಳೆಯ ಬಾಕಿ ಬಿಲ್‌ಗಳನ್ನು ಹಂತ ಹಂತವಾಗಿ ಇತ್ಯರ್ಥಪಡಿಸಬೇಕು. ಗುತ್ತಿಗೆದಾರರಿಗೆ ಹಣ ಪಾವತಿಸದಿದ್ದರೆ ತುರ್ತು ಸಂದರ್ಭಗಳಲ್ಲಿ ಅವರು ಕೆಲಸ ಮಾಡಲು ಮುಂದೆ ಬರುವುದಿಲ್ಲ.

ಆದ್ದರಿಂದ ವೀಡಿಯೋ ಕಾನ್ಫರೆನ್ಸ್ ಸಭೆಗಳಲ್ಲಿ ಈ ವಿಷಯವನ್ನು ಗಂಭೀರವಾಗಿ ಪ್ರಸ್ತಾಪಿಸಿ, ಬಾಕಿ ಹಣ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿ ಎಂದು ಪಂಚಾಯತ್ ರಾಜ್ ಹಾಗೂ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಬೋರ್‌ವೆಲ್ ಬಿಲ್ ಪಾವತಿ ಬಾಕಿ ಇದ್ದು, 6.5 ಕೋಟಿ ರೂ.ಬಿಲ್ ಪಾವತಿಗೆ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ.ಎಸ್.ಆಕಾಶ್ ತಿಳಿಸಿದರು.

ಇದನ್ನೂ ಓದಿ:

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕಿ ಸವಿತಾ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,67,000 ಹೆಕ್ಟೇರ್ ತೋಟಗಾರಿಕೆ ವಿಸ್ತೀರ್ಣವಿದ್ದು, ಹೊಳಲ್ಕೆರೆ ತಾಲ್ಲೂಕಿನಲ್ಲಿ ಒಟ್ಟು 32,000 ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳಿವೆ. ತಾಲ್ಲೂಕಿನಲ್ಲಿ ಅಡಿಕೆ ಹಾಗೂ ತೆಂಗು ಹೆಚ್ಚು ಬೆಳೆಯಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಾಲ್ಲೂಕಿನ ರೈತರಿಗೆ ತೆಂಗು ಅಭಿವೃದ್ಧಿ ಹಾಗೂ ಪುನಶ್ಚೇತನ ಕುರಿತು ರೈತರಿಗೆ ಮಾಹಿತಿ ನೀಡಿ, ಕಾರ್ಯಾಗಾರಗಳನ್ನು ಆಯೋಜಿಸಬೇಕು. ಮಲೆನಾಡು ಭಾಗದಲ್ಲಿ ಅಡಿಕೆ ಹಾಗೂ ಇತರೆ ವಾಣಿಜ್ಯ ಬೆಳೆಗಳಿಗೆ ಹೆಚ್ಚಿನ ಪರಿಹಾರ ಸಿಗುತ್ತಿದ್ದು, ಬಯಲುಸೀಮೆಗೆ ಚಿತ್ರದುರ್ಗ ಜಿಲ್ಲೆಯ ರೈತರಿಗೂ ಅಲ್ಪಮೊತ್ತದ ಪರಿಹಾರ ಸಿಗುತ್ತಿದ್ದು, ನಮ್ಮ ಭಾಗದ ರೈತರಿಗೂ ಹೆಚ್ಚಿನ ಬೆಂಬಲ ಸಿಗಬೇಕಾಗಿದೆ. ಈ ತಾರತಮ್ಯ ನಿವಾರಿಸಲು ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪಂಚಾಯತ್ ಸಿಇಒ ಡಾ.ಎಸ್.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !