ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ ಹಾಟ್‌ಸ್ಪಾಟ್ ಹೊಟೇಲ್‌ಗಳು ಹಾಗೂ ರೆಸ್ಟೋರೆಂಟ್‌ಗಳ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಯುಬಿ ಸಿಟಿ, ಎಂಜಿ ರಸ್ತೆ, ಬ್ರಿಗೇಡ್ ರೋಡ್ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿರುವ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಕೊಳೆತ ಮಾಂಸ ಹಾಗೂ ಅವಧಿ ಮೀರಿದ ಆಹಾರ ಪದಾರ್ಥಗಳನ್ನ ಜಪ್ತಿ ಮಾಡಿದ್ದಾರೆ. ಯುಬಿ ಸಿಟಿಯ ಪ್ರಮುಖ ಹೊಟೇಲ್ ಒಂದರಿಂದ 45 ಕೆಜಿ ಕೊಳೆತ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ.
ಆಹಾರ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹತ್ತಕ್ಕೂ ಹೆಚ್ಚು ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯ ಅಧಿಕಾರಿಗಳು ತಂಡಗಳಾಗಿ ದಾಳಿ ನಡೆಸಿದ್ದಾರೆ. ಯುಬಿ ಸಿಟಿ ಸ್ಕೈ ಹೋಟೆಲ್ ಸೇರಿದಂತೆ ಅದರ ಸುತ್ತಮುತ್ತಲಿನ ಪ್ರತಿಷ್ಠಿತ ಹೋಟೆಲ್‌ಗಳ ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳನ್ನು ಪರಿಶೀಲಿಸಲಾಗಿದೆ. ಈ ದಾಳಿಯಲ್ಲಿ ಕಂಡುಬಂದ ಕೊಳೆತ ಮೀನು, ಮಾಂಸದ ರಾಶಿ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.
51 ಕೆಜಿ ಆಹಾರ ಪದಾರ್ಥಗಳು ವಶಕ್ಕೆ
ಅಧಿಕಾರಿಗಳ ಪರಿಶೀಲನೆ ವೇಳೆ ಕೆಲವು ಹೋಟೆಲ್‌ಗಳಲ್ಲಿ ಕೊಳೆತ ಮಾಂಸ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಕೆಲವು ಕಡೆ ಅವಧಿ ಮೀರಿದ ಆಹಾರ ಹಾಗೂ ಸರಿಯಾದ ಲೇಬಲ್ ಇಲ್ಲದ ಆಹಾರ ಪದಾರ್ಥಗಳನ್ನ ಸಂಗ್ರಹಿಸಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ದಾಳಿಯ ವೇಳೆ ಸುಮಾರು 51 ಕೆಜಿ ಆಹಾರ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಮಾಂಸ, ಮೀನು ಹಾಗೂ ತರಕಾರಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಸೇರಿವೆ. ಇದರ ಜತೆಗೆ ಅಡುಗೆ ಎಣ್ಣೆಯನ್ನೂ ಪರಿಶೀಲನೆ ಮಾಡಲಾಗಿದೆ. ಈಗಾಗಲೇ ಹತ್ತಾರು ಬಾರಿ ಬಳಕೆ ಮಾಡಿದ್ದು ಎನ್ನಲಾದ 25 ಲೀಟರ್ ಅಡುಗೆ ಎಣ್ಣೆ ಸೀಜ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸ್ಕೈ ಲೌಂಜ್ ಅಡುಗೆಮನೆಗೆ ಬೀಗ
ಯುಬಿ ಸಿಟಿಯ ಸ್ಕೈ ಲೌಂಜ್ ಹೊಟೇಲ್‌ನ ಅಡುಗೆಮನೆಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಈ ವೇಳೆ ಅಡುಗೆಮನೆಯ ಸ್ಥಿತಿ ನೋಡಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. 45 ಕೆಜಿಯಷ್ಟು ದನ ಹಾಗೂ ಚಿಕನ್‌ನ ಕೊಳೆತ ಮಾಂಸ ಪತ್ತೆಯಾಗಿದ್ದು, ಅಡುಗೆ ಮನೆಯಲ್ಲಿ ಸೀಝ್ ಮಾಡಲಾಗಿದೆ.



