ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದಲ್ಲಿ ಖಾಲಿ ಸೈಟ್ ಇದ್ಯಾ? ಹಾಗಾದರೆ ಈ ಸುದ್ದಿ ನಿಮಗೆ ತುಂಬಾ ಮುಖ್ಯ. ನಿಮ್ಮ ನಿವೇಶನದಲ್ಲಿ ಕಸ, ತ್ಯಾಜ್ಯ ಅಥವಾ ಗಿಡಗಂಟಿಗಳು ಬೆಳೆದಿದ್ದರೆ ಆಗಸ್ಟ್ 15ರೊಳಗೆ ಸ್ವಚ್ಛಗೊಳಿಸುವುದು ಉತ್ತಮ. ಇಲ್ಲವಾದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ನಿಮ್ಮ ಸೈಟ್ ಸ್ವಚ್ಛಗೊಳಿಸಿ, ಅದರ ಸಂಪೂರ್ಣ ವೆಚ್ಚವನ್ನು ನಿಮ್ಮಿಂದಲೇ ವಸೂಲಿ ಮಾಡಲಿದೆ.
ಖಾಲಿ ನಿವೇಶನ ಮಾಲೀಕರಿಗೆ GBA ಸೂಚನೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ GBA ಕೈಗೊಂಡಿರುವ ‘ಕಸದಿಂದ ಸ್ವಾತಂತ್ರ್ಯ’ ಅಭಿಯಾನದ ಭಾಗವಾಗಿ ಖಾಲಿ ನಿವೇಶನಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಘನತ್ಯಾಜ್ಯ ನಿರ್ವಹಣಾ ನಿಯಮಗಳ ಪ್ರಕಾರ ಖಾಲಿ ಸೈಟ್‌ಗಳನ್ನು ಸ್ವಚ್ಛವಾಗಿ ಹಾಗೂ ನೈರ್ಮಲ್ಯಯುತವಾಗಿ ಇಡುವುದು ಮಾಲೀಕರ ಜವಾಬ್ದಾರಿಯಾಗಿದೆ.
ಆ.15ರೊಳಗೆ ಸ್ವಚ್ಛಗೊಳಿಸಿ
ನಿಗದಿತ ಗಡುವಿನೊಳಗೆ ಸೈಟ್‌ನಲ್ಲಿರುವ ತ್ಯಾಜ್ಯವನ್ನು ತೆರವುಗೊಳಿಸಿ, ಸೂಚಿಸಿರುವ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಗಡುವಿನ ಬಳಿಕ GBA ಸಿಬ್ಬಂದಿಯೇ ಸ್ವಚ್ಛತಾ ಕಾರ್ಯ ಕೈಗೊಳ್ಳಲಿದೆ. ಆದರೆ ಅದಕ್ಕೆ ಮಾಲೀಕರು ಜಿಬಿಎ ಫಿಕ್ಸ್ ಮಾಡುವ ಹಣ ಪಾವತಿಸಿ, ಸ್ವಚ್ಚಮಾಡಿಸಬೇಕಾಗಲಿದೆ.
ಇದನ್ನೂ ಓದಿ:
ಸ್ವಚ್ಛತಾ ವೆಚ್ಚವೂ ಮಾಲೀಕರದ್ದೇ
20×30 ಅಡಿ ಸೈಟ್‌ಗೆ ಸ್ವಚ್ಛತಾ ವೆಚ್ಚ ₹6,700ರಿಂದ ₹7,700ರವರೆಗೆ ಇರಲಿದ್ದು, ತ್ಯಾಜ್ಯ ಸಾಗಣೆ ವೆಚ್ಚ ₹19,200 ಎಂದು ನಿಗದಿಪಡಿಸಲಾಗಿದೆ. 30×40 ಅಡಿ ನಿವೇಶನಕ್ಕೆ ಸ್ವಚ್ಛತಾ ವೆಚ್ಚ ₹13,400ರಿಂದ ₹14,400 ಹಾಗೂ ಸಾಗಣೆ ವೆಚ್ಚ ₹38,400 ಆಗಿದೆ.
ದೊಡ್ಡ ಸೈಟ್‌ಗೆ ಹೆಚ್ಚು ವೆಚ್ಚ
30×50, 40×60 ಮತ್ತು 50×80 ಅಡಿ ನಿವೇಶನಗಳಿಗೆ ಸೈಟ್‌ನ ಗಾತ್ರಕ್ಕೆ ಅನುಗುಣವಾಗಿ ಸ್ವಚ್ಛತೆ ಹಾಗೂ ತ್ಯಾಜ್ಯ ಸಾಗಣೆಯ ವೆಚ್ಚ ಹೆಚ್ಚಾಗಲಿದೆ. ಹೀಗಾಗಿ ಹೆಚ್ಚುವರಿ ಹಣ ಪಾವತಿಸುವುದನ್ನು ತಪ್ಪಿಸಲು ಖಾಲಿ ನಿವೇಶನ ಮಾಲೀಕರು ಗಡುವಿನೊಳಗೆ ಸ್ವಚ್ಛತೆ ಕೈಗೊಳ್ಳುವುದು ಸೂಕ್ತ.



