August 10, 2026
Monday, August 10, 2026
spot_img

ಟ್ರಿಬ್ಯೂನಲ್ ಸುಧಾರಣಾ ಮಸೂದೆ ಅಂಗೀಕಾರ: ನೇಮಕಾತಿ, ಆಡಳಿತದಲ್ಲಿ ಹೊಸ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಟ್ರಿಬ್ಯೂನಲ್‌ಗಳಲ್ಲಿ ಕೆಲಸಗಳು ಹೇಗೆ ನಡೆಯುತ್ತವೆ, ಸದಸ್ಯರ ನೇಮಕ ಹೇಗೆ ಆಗುತ್ತದೆ ಎಂಬುದರ ಮೇಲೆ ಪರಿಣಾಮ ಬೀರುವ ಮಹತ್ವದ ಮಸೂದೆ ಇದೀಗ ಲೋಕಸಭೆಯ ಅನುಮೋದನೆ ಪಡೆದಿದೆ.

‘ಟ್ರಿಬ್ಯೂನಲ್ ಸುಧಾರಣಾ ಮಸೂದೆ 2026’ ಅಂಗೀಕಾರವಾಗಿದ್ದು, ಇದರೊಂದಿಗೆ ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ (NTC) ರಚನೆಗೆ ದಾರಿ ತೆರೆದಿದೆ. ಮಸೂದೆ ಜಾರಿಗೆ ಬಂದರೆ ದೇಶದ ಅರೆ-ನ್ಯಾಯಾಂಗ ಸಂಸ್ಥೆಗಳ ಆಡಳಿತ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳಾಗುವ ಸಾಧ್ಯತೆಯಿದೆ.

ಟ್ರಿಬ್ಯೂನಲ್ ಸುಧಾರಣಾ ಮಸೂದೆ ಏನು?

ಟ್ರಿಬ್ಯೂನಲ್‌ಗಳ ಸದಸ್ಯರ ನೇಮಕಾತಿ, ಅರ್ಹತೆ, ವೇತನ, ಭತ್ಯೆ, ರಾಜೀನಾಮೆ ಹಾಗೂ ಸೇವಾ ಷರತ್ತುಗಳಿಗೆ ಏಕರೂಪದ ನಿಯಮ ರೂಪಿಸುವುದು ಮಸೂದೆಯ ಪ್ರಮುಖ ಉದ್ದೇಶವಾಗಿದೆ. ಪ್ರಸ್ತುತ ಟ್ರಿಬ್ಯೂನಲ್‌ಗಳ ಅಧಿಕಾರ ವ್ಯಾಪ್ತಿಯನ್ನು ಬದಲಿಸುವ ಉದ್ದೇಶ ಇಲ್ಲ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸ್ಪಷ್ಟಪಡಿಸಿದ್ದಾರೆ.

ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗ ರಚನೆ

ಮಸೂದೆಯ ಪ್ರಮುಖ ಪ್ರಸ್ತಾವನೆ ರಾಷ್ಟ್ರೀಯ ಟ್ರಿಬ್ಯೂನಲ್ ಆಯೋಗದ ಸ್ಥಾಪನೆ. ನವದೆಹಲಿಯಲ್ಲಿ ಕೇಂದ್ರ ಕಚೇರಿ ಹೊಂದಲಿರುವ NTC, ವಿವಿಧ ಟ್ರಿಬ್ಯೂನಲ್‌ಗಳ ಖಾಲಿ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ, ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಡಿಜಿಟಲ್ ಪ್ರಕರಣ ನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲಿದೆ.

NTCಯಲ್ಲಿ ಯಾರೆಲ್ಲ ಇರಲಿದ್ದಾರೆ?

ಆಯೋಗದಲ್ಲಿ ಒಬ್ಬ ಅಧ್ಯಕ್ಷರು ಮತ್ತು ನಾಲ್ವರು ಸದಸ್ಯರು ಇರಲಿದ್ದಾರೆ. ಇಬ್ಬರು ನ್ಯಾಯಾಂಗ ಹಾಗೂ ಇಬ್ಬರು ತಾಂತ್ರಿಕ ಸದಸ್ಯರನ್ನು ಒಳಗೊಂಡಿರುತ್ತದೆ. ಅಧ್ಯಕ್ಷ ಸ್ಥಾನಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಅಥವಾ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಅರ್ಹರಾಗಿರುತ್ತಾರೆ. ತಾಂತ್ರಿಕ ಸದಸ್ಯರಿಗೆ ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 25 ವರ್ಷಗಳ ಅನುಭವದ ಮಾನದಂಡವಿದೆ.

ಇದನ್ನೂ ಓದಿ:

ನೇಮಕಾತಿ ಪ್ರಕ್ರಿಯೆಗೆ ಹೊಸ ಚೌಕಟ್ಟು

ಪ್ರತಿಯೊಂದು ಟ್ರಿಬ್ಯೂನಲ್‌ಗೆ ಶೋಧನಾ ಮತ್ತು ಆಯ್ಕೆ ಸಮಿತಿಗಳನ್ನು ರಚಿಸಲು NTCಗೆ ಅಧಿಕಾರ ನೀಡಲಾಗುತ್ತದೆ. ಆಯ್ಕೆ ಶಿಫಾರಸು ಬಂದ ಬಳಿಕ ಮೂರು ತಿಂಗಳೊಳಗೆ ಕೇಂದ್ರ ಸರ್ಕಾರ ನೇಮಕಾತಿ ಪೂರ್ಣಗೊಳಿಸಬೇಕು ಎಂಬ ಪ್ರಸ್ತಾವವಿದೆ. ಅಧ್ಯಕ್ಷರಿಗೆ ಐದು ವರ್ಷ ಅಥವಾ 70 ವರ್ಷ ವಯಸ್ಸಿನವರೆಗೆ, ಸದಸ್ಯರಿಗೆ ಐದು ವರ್ಷ ಅಥವಾ 67 ವರ್ಷ ವಯಸ್ಸಿನವರೆಗೆ ಅಧಿಕಾರಾವಧಿ ನಿಗದಿಪಡಿಸಲಾಗಿದೆ.

ಮಸೂದೆಯ ಪ್ರಮುಖ ಉದ್ದೇಶಗಳು

ಟ್ರಿಬ್ಯೂನಲ್‌ಗಳ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಬಾಕಿ ಪ್ರಕರಣಗಳ ವಿಲೇವಾರಿ ವೇಗಗೊಳಿಸುವುದು ಹಾಗೂ ಕಾರ್ಯಕ್ಷಮತೆ ಸುಧಾರಿಸುವುದು ಮಸೂದೆಯ ಪ್ರಮುಖ ಗುರಿಗಳಾಗಿವೆ. ಅಗತ್ಯವಿಲ್ಲದ ಟ್ರಿಬ್ಯೂನಲ್‌ಗಳನ್ನು ರದ್ದುಗೊಳಿಸಿ, ಅವುಗಳ ಅಧಿಕಾರವನ್ನು ಹೈಕೋರ್ಟ್ ಅಥವಾ ಇತರ ನ್ಯಾಯಾಲಯಗಳಿಗೆ ವರ್ಗಾಯಿಸುವ ಪ್ರಸ್ತಾವವೂ ಇದರಲ್ಲಿದೆ.

ವಿಪಕ್ಷಗಳ ವಿರೋಧ

ಮಸೂದೆ ಮಂಡನೆಯ ವೇಳೆ ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆ ನಡೆಸಿದರು. ಕೆಲವು ವಿಪಕ್ಷ ಸಂಸದರು ಮಸೂದೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರೂ, ಗದ್ದಲದ ನಡುವೆಯೇ ಲೋಕಸಭೆಯಲ್ಲಿ ಮಸೂದೆ ಅಂಗೀಕಾರಗೊಂಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !