August 11, 2026
Tuesday, August 11, 2026
spot_img

ಆಸ್ಪತ್ರೆಯಲ್ಲಿದ್ದಾಗಲೂ ರಾಜೀನಾಮೆಗೆ ಸಿಎಂ ಒತ್ತಾಯಿಸಿದ್ರು: ಬಸವರಾಜ ಹೊರಟ್ಟಿ ಆರೋಪ

ಹೊಸದಿಗಂತ ವರದಿ ಹುಬ್ಬಳ್ಳಿ:

ಅನಾರೋಗ್ಯ ಕಾರಣದಿಂದ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಗಂಭೀರ ಆರೋಪ ಮಾಡಿದ್ದಾರೆ.

ಸಭಾಪತಿ ಸ್ಥಾನದಿಂದ ರಾಜೀನಾಮೆ ಪಡೆದ ಬಗ್ಗೆ ಹುಬ್ಬಳ್ಳಿ ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ನಿರಂತರ ಒತ್ತಡ

ಮುಖ್ಯಮಂತ್ರಿ ಅವರ ಜೊತೆಗೆ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಕುರಿತು ಆ. 14 ರಂದು ಚರ್ಚೆ ಆಗಿತ್ತು. ಈ ಕುರಿತು ಒಪ್ಪಂದವಾಗಿದ್ದರೂ, ಮುಖ್ಯಮಂತ್ರಿ ಅವರಿಂದ ನಿರಂತರ ಒತ್ತಡ ಬಂದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಆ. 7ರಂದೇ ರಾಜೀನಾಮೆ ನೀಡಬೇಕಾಯಿತು ಎಂದು ಅವರು ದೂರಿದರು.

ನಾನು ಯಾರಿಗೂ ರಾಜೀನಾಮೆ ಪತ್ರ ಸಿದ್ಧಪಡಿಸುವಂತೆ ಹೇಳಿರಲಿಲ್ಲ. ಅವರು ನನ್ನ ಮುಂದೆ ರಾಜೀನಾಮೆ ಪತ್ರವನ್ನು ಟೈಪ್ ಮಾಡಿ, ಅದಕ್ಕೆ ಸಹಿ ಹಾಕುವಂತೆ ಬಲವಂತ ಮಾಡಿದರು. ಅಂತಿಮವಾಗಿ ಪರಿಸ್ಥಿತಿಗೆ ಮಣಿದು ರಾಜೀನಾಮೆ ನೀಡಬೇಕಾಯಿತು ಎಂದು ಅವರು ಆರೋಪಿಸಿದರು.

ಸರ್ಕಾರದ ಈ ನಡೆ ನೋವುಂಟು ಮಾಡಿದೆ

ಪಕ್ಷದ ವಿಚಾರದಲ್ಲಿ ಹೈಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಳ್ಳಬಹುದು. ಆದರೆ ಸಭಾಪತಿ ಹುದ್ದೆಗೆ ಸಂಬಂಧಿಸಿ ಪಕ್ಷದ ಲೆಟರ್ ಹೆಡ್‌ನಲ್ಲಿ ಹೆಸರು ಘೋಷಣೆ ಮಾಡಿರುವುದು ಸರಿಯಲ್ಲ. ದೇಶದಲ್ಲಿಯೇ ಇದು ಮೊದಲ ಉದಾಹರಣೆಯಾಗಿದೆ. ಸರ್ಕಾರದ ಈ ನಡೆ ಮನಸ್ಸಿಗೆ ತುಂಬಾ ನೋವುಂಟು ಮಾಡಿದೆ. ಇನ್ನು ಮುಂದೆ ಸಾಮಾನ್ಯ ಸದಸ್ಯನಾಗಿ ವಿಧಾನ ಪರಿಷತ್ ಕಲಾಪದಲ್ಲಿ ಭಾಗವಹಿಸುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ:

ನಾನು ಏನು ತಪ್ಪು ಮಾಡಿದ್ದೇನೆ?

1956ರಿಂದ ಈವರೆಗೆ ವಿಧಾನ ಪರಿಷತ್ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿರುವ ನಿದರ್ಶನ ನಡೆದಿಲ್ಲ. ರಾಜ್ಯದ ವಿಧಾನ ಪರಿಷತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ನಡೆದಿದೆ. ಸಭಾಪತಿ ಸ್ಥಾನಕ್ಕೆ ಸಂಬಂಧಿಸಿದಂತೆ ಈ ರೀತಿಯ ವರ್ತನೆ ಸರಿಯಲ್ಲ. ನಾನು ಏನು ತಪ್ಪು ಮಾಡಿದ್ದೇನೆ? ಭ್ರಷ್ಟಾಚಾರ ಮಾಡಿದ್ದೇನಾ? ಅವ್ಯವಹಾರ ಮಾಡಿದ್ದೇನಾ? ನನ್ನ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವರ ಬಳಿ ಯಾವ ವಿಷಯವಿತ್ತು ಎಂದು ಅವರು ಇದೇ ಸಂದರ್ಭ ಪ್ರಶ್ನಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !