August 11, 2026
Tuesday, August 11, 2026
spot_img

ಅನ್ನಂ ಬ್ರಹ್ಮ ಮಾಲಿಕೆ | ಉಪವಾಸ ಆಚರಣೆಗೆ ಸರಿಯಾದ ಮಾರ್ಗದರ್ಶನವೂ ಅಗತ್ಯ: ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೂಕ್ತ ಕ್ರಮದಲ್ಲಿ ಉಪವಾಸ ಮಾಡಿದರೆ ನಿಶ್ಯಕ್ತಿಯಾಗುವುದಲ್ಲ. ಅದು ಬಲವೃದ್ಧಿಗೆ ಸಹಕಾರಿ. ಆದರೆ ಉಪವಾಸ ಅಚರಣೆಗೆ ಸರಿಯಾದ ಮಾರ್ಗದರ್ಶನವೂ ಅಗತ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯ ಮಂಗಳವಾರದ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಅವರು ‘ಉಪವಾಸ’ದ ಕುರಿತಾಗಿ ಪ್ರವಚನ ಅನುಗ್ರಹಿಸಿದರು.

ಉಪವಾಸದಿಂದ ದೇಹ ಮತ್ತು ಮನಸ್ಸು ಹಗುರವಾಗುತ್ತದೆ. ಹೃದಯದಲ್ಲಿ ಶುದ್ಧತೆ, ದೇಹದಿಂದ ಬೇಡವಾದ ಅಂಶಗಳ ನಿರ್ಗಮನ, ಬಾಯಿ-ಗಂಟಲುಗಳ ಶುದ್ಧತೆ, ಹಿತವಾದ ಹಸಿವು ಮುಂತಾದವುಗಳು ಸರಿಯಾಗಿ ಉಪವಾಸವನ್ನು ನಡೆಸಿದಾಗ ಸಿಗುವ ಪ್ರಯೋಜನಗಳಾಗಿವೆ ಎಂದು ಶ್ರೀಗಳು ಹೇಳಿದರು.

ಧರ್ಮಶಾಸ್ತ್ರದ ಪ್ರಕಾರ ಮೂರು ರೀತಿಯ ಉಪವಾಸಗಳಿವೆ. ದಿನದಲ್ಲಿ ಎರಡು ಹೊತ್ತು ಮಾತ್ರ ಊಟ ಮಾಡಿ, ನಡುವೆ ಯಾವುದೇ ಆಹಾರ ಸ್ವೀಕರಿಸದಿರುವುದು ನಿತ್ಯೋಪವಾಸ ಎನಿಸಿಕೊಂಡರೆ, ಏಕಾದಶಿ, ಶಿವರಾತ್ರಿಗಳಲ್ಲಿ ಮಾಡುವ ಉಪವಾಸವು ವ್ರತೋಪವಾಸ ಹಾಗೂ ಕೃಚ್ಛ್ರ ಎಂಬ ಉಪವಾಸ ವಿಧಿಯು ಪಾಪವನ್ನು ತೊಳೆದುಕೊಳ್ಳುವ ವಿಧವಾಗಿದ್ದು, ಶಾಸ್ತ್ರಗಳಲ್ಲಿ ಅನೇಕ ವಿಧವಾದ ಕೃಚ್ಛ್ರ ಉಪವಾಸವನ್ನು ಸೂಚಿಸಲಾಗಿದ್ದು, ಬೇರೆಬೇರೆ ಪಾಪಗಳನ್ನು ತೊಳೆದುಕೊಳ್ಳಲು ಇರುವ ಪ್ರಾಯಶ್ಚಿತ್ತ ಉಪವಾಸಗಳು ಇವಾಗಿವೆ ಎಂದು ಶ್ರೀಗಳು ವಿವರಿಸಿದರು.

ಆಯುರ್ವೇದ ಶಾಸ್ತ್ರವೂ ಉಪವಾಸವನ್ನು ಹೇಳಿದೆ, ಊಟವನ್ನು ಸರಿಯಾಗಿ ಮಾಡಿದರೆ ಹಲವು ರೋಗಗಳ ಪರಿಹಾರ. ಊಟದಿಂದ ಪರಿಹಾರವಾಗದಿರುವುದು ಉಪವಾಸದಿಂದ ಪರಿಹಾರ ಮಾಡಿಕೊಳ್ಳಲು ಸಾಧ್ಯ ಮತ್ತು ಊಟ ಹಾಗೂ ಉಪವಾಸ ಎರಡರಲ್ಲಿಯೂ ಪರಿಹಾರವಾಗದಿರುವುದಕ್ಕೆ ಮಾತ್ರ ಆಯುರ್ವೇದ ಔಷಧವನ್ನು ಸೂಚಿಸುತ್ತದೆ ಎಂದರು.

ತಪ್ಪಾದ ರೀತಿಯಲ್ಲಿ ಅಥವಾ ಅತಿಯಾಗಿ ಉಪವಾಸವನ್ನು ಮಾಡಿದರೆ ಸಂಧಿನೋವು, ದೇಹದ ದುರ್ಬಲತೆ, ಬಾಯಾರಿಕೆ, ಹಸಿವಿನ ನಾಶ, ರುಚಿ ಕಡಿಮೆಯಾಗುವುದು, ಮಾನಸಿಕ ಅಸಮತೋಲನ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆಯ ಉದ್ದೇಶದಿಂದ ಉಪವಾಸ ಮಾಡಬಾರದು ಹಾಗೂ ಧಾರ್ಮಿಕ ಉಪವಾಸಗಳನ್ನೂ ಕೂಡ ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಗರ್ಭಿಣಿಯರು, ಮಕ್ಕಳು, ವೃದ್ಧರು, ದುರ್ಬಲರು, ಅತಿಹಸಿವು ಅಥವಾ ಬಾಯಾರಿಕೆ ಇರುವವರು ಮತ್ತು ಕೆಲವು ಕಾಯಿಲೆಗಳಿರುವವರು ಸ್ವಯಂಪ್ರೇರಿತವಾಗಿ ಉಪವಾಸ ಮಾಡಬಾರದು ಎಂದು‌ ಶ್ರೀಗಳು ಎಚ್ಚರಿಸಿದರು.

ಆಹಾರ ಮತ್ತು ಉಪವಾಸ ಎರಡೂ ದೇಹದ ಸಹಜ ಪ್ರಕ್ರಿಯೆ, ಆಯುರ್ವೇದ, ಆಧ್ಯಾತ್ಮಿಕತೆ ಮತ್ತು ಸರಿಯಾದ ಜ್ಞಾನವನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು. ಊಟವಾಗಲಿ, ಉಪವಾಸವಾಗಲಿ ಜ್ಞಾನಪೂರ್ವಕವಾಗಿ ಮತ್ತು ಸರಿಯಾದ ಮಾರ್ಗದರ್ಶನದೊಂದಿಗೆ ಮಾಡಬೇಕು. ಸರಿಯಾದ ಆಹಾರ ಮತ್ತು ಉಪವಾಸಗಳು ಆರೋಗ್ಯ ಮತ್ತು ಆಧ್ಯಾತ್ಮಿಕ ಪ್ರಗತಿಗೆ ಸಹಾಯಕ. ಆದರೆ ಜ್ಞಾನವಿಲ್ಲದೆ ಮಾಡಿದರೆ ಎರಡೂ ಹಾನಿಕರವಾಗಬಹುದು ಎಂದು ಅಭಿಪ್ರಾಯಪಟ್ಟರು.

ಉದ್ಯಮಿ, ಪದ್ಮಶ್ರೀ ಪುರಸ್ಕೃತ ಡಾ. ವಿಜಯ ಸಂಕೇಶ್ವರ್ ದಂಪತಿ ಶ್ರೀಕರಾರ್ಚಿತ ರಾಮಪೂಜೆ, ಗೋಪೂಜೆಗಳಲ್ಲಿ ಭಾಗವಹಿಸಿ, ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು.

ಸಿದ್ದಾಪುರ ಹವ್ಯಕ ಮಂಡಲದ ಭಾನ್ಕುಳಿ, ಇಟಗಿ, ದೊಡ್ಮನೆ, ಚಪ್ಪರಮನೆ, ತಾಳಗುಪ್ಪಇಡುವಾಣಿ ವಲಯಗಳ ಪರವಾಗಿ ಬಿ.ಎಸ್. ಮಂಜುನಾಥ ಶರ್ಮಾ ದಂಪತಿಗಳು ಗುರುಭಿಕ್ಷಾ ಸೇವೆ ನೆರವೇರಿಸಿದರು.

ಕೆ. ಎನ್. ಮಂಜುನಾಥ ಭಟ್, ಶಾಂತಾರಾಮ ಹಿರೇಮನೆ, ಜಯಂತಿ ಹೆಗಡೆ, ರಾಘವೇಂದ್ರ ಹೆಗಡೆ ಮುಸವಳ್ಳಿ, ದಿನ ಪ್ರಧಾನರಾಗಿ ರಾಧಾಕೃಷ್ಣ ಭಟ್ ದಂಪತಿಗಳು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !