ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಟೆಕ್ಕಿ ಅದ್ವೈತ್ ಶಿವಗಂಗೆ ಬೆಟ್ಟದಲ್ಲಿ ಮಿಸ್ಸಿಂಗ್ ಆಗಿರುವ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಬೆಟ್ಟದಲ್ಲಿ ಅದ್ವೈತ್‌ರನ್ನು ಹುಡುಕಲು ಬೆಟ್ಟ ಹತ್ತುವ ಎಕ್ಸ್‌ಪರ್ಟ್ ಕೋತಿರಾಜ್ ಅವರನ್ನು ಕರೆಸಿದ್ದು, ಅದ್ವೈತ್ ಈ ಬೆಟ್ಟದಲ್ಲಿ ಇಲ್ವೇ ಇಲ್ಲ ಎಂದು ಹೇಳಿದ್ದಾರೆ.
ಪೊಲೀಸರಿಗೆ ಅದ್ವೈತ್ ಮಿಸ್ಸಿಂಗ್ ಪ್ರಕರಣ ತಲೆನೋವಾಗಿ ಪರಿಣಮಿಸಿದೆ. ಟ್ರೆಕ್ಕಿಂಗ್‌ಗೆಂದು ಅದ್ವೈತ್ ಬೆಟ್ಟದ ಮೇಲೆ ಹೋದ ಸಿಸಿಟಿವಿ ರೆಕಾರ್ಡಿಂಗ್ ಇದೆ. ಆದರೆ ಆತ ವಾಪಾಸ್ ಬಂದ ಸುಳಿವಿಲ್ಲ. ಬೆಟ್ಟದ ಕೆಳಗೆ ಆತ ಬಾಡಿಗೆಗೆಂದು ತಂದಿದ್ದ ಗಾಡಿ ಹಾಗೇ ಇದೆ. ಏಳು ದಿನಗಳು ಕಳೆದರೂ ಅದ್ವೈತ್ ಯಾಕೆ ಸಿಗುತ್ತಿಲ್ಲ ಎನ್ನುವುದು ದೊಡ್ಡ ಸವಾಲಾಗಿದೆ.
ಕೋತಿರಾಜ್ ಹೇಳಿದ್ದೇನು?
ಕೋತಿರಾಜ್ ಹಾಗೂ ಅವರ ಟೀಂ ಕಳೆದ ಎರಡು ದಿನಗಳಿಂದ ಬೆಟ್ಟದ ಒಂದು ಇಂಚನ್ನೂ ಬಿಡದೇ ಹಗ್ಗದ ಸಹಾಯದಿಂದ ಹುಡುಕಾಟ ನಡೆಸಿದ್ದಾರೆ. ಕಡಿದಾದ ಸ್ಥಳಗಳಲ್ಲಿ, ಪೊದೆಗಳಲ್ಲಿ ಶಾಂತಲಾ ಡ್ರಾಪ್ ಮೂಲಕ ಹುಡುಕಾಟ ನಡೆಸಿದೆ. ಆದರೆ ಇಷ್ಟೆಲ್ಲಾ ಹುಡುಕಾಟ ಮಾಡಿದ ನಂತರ ಬೆಟ್ಟದಲ್ಲಿ ಯಾರೇ ಇದ್ದರೂ ಸಿಗಲೇಬೇಕಿತ್ತು. ಒಂದಾ ಅದ್ವೈತ್ ಸಿಗಲೇಬಾರದು ಎಂದು ಡಿಸೈಡ್ ಮಾಡಿದ್ದಾರೆ ಇಲ್ಲವೋ ಅವರು ಬೆಟ್ಟದಲ್ಲಿ ಇಲ್ಲವೇ ಇಲ್ಲ. ಸುಮ್ಮನೆ ಆಟ ಆಡಿಸಬೇಡ ಅದ್ವೈತ್ ಎಲ್ಲಿದ್ದರೂ ಕಣ್ಣೆದುರು ಬಾ, ಎಲ್ಲರೂ ಕಷ್ಟಪಟ್ಟು ಹುಡುಕುತ್ತಿದ್ದೀವಿ ಎಂದು ಕೋತಿರಾಜ್ ಹೇಳಿದ್ದಾರೆ.
ಬೆಟ್ಟಕ್ಕೆ ಬಂದಿರೋದು ನಿಜ, ಮೇಲೆ ಹೋಗಿರೋದು ನಿಜ
ಬೆಂಗಳೂರಿನ ವೈಟ್‌ಫೀಲ್ಡ್ ನಿವಾಸಿ ಅದ್ವೈತ್ ಶಿವಗಂಗೆ ಬೆಟ್ಟ ಏರಿರೋದು ನಿಜ. ಮೇಲೆ ಹೋಗಿರೋದು ನಿಜ. ಆದರೆ ಈಗ ಆತ ಬೆಟ್ಟದ ಮೇಲೆ ಇಲ್ಲ. ಒಬ್ಬ ವ್ಯಕ್ತಿ ಬದುಕಿರುವಂತೆ, ಗಾಯಗೊಂಡಂತೆ ಅಥವಾ ಮೃತದೇಹವನ್ನು ಹುಡುಕೋಕೆ ಇಷ್ಟು ಸಮಯ ಬೇಕಿಲ್ಲ. ಕೋತಿರಾಜ್ ಹಾಗೂ ಟೀಂ, ಪೊಲೀಸರು, ಎನ್‌ಡಿಆರ್‌ಎಫ್ ತಂಡ ಹುಟುಕಾಟ ನಡೆಸಿರುವ ರೀತಿಗೆ ಆತ ಪತ್ತೆಯಾಗಲೇಬೇಕಿತ್ತು ಎನ್ನಲಾಗಿದೆ.
ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತ
ಇಡೀ ಬೆಟ್ಟವನ್ನು ಜಾಲಾಡಿದ ನಂತರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಬೆಟ್ಟವನ್ನು ಬಿಟ್ಟು ಆಚೆ ಹುಡುಕಾಟಕ್ಕೆ ಪೊಲೀಸರು ಆಲೋಚಿಸಿದ್ದಾರೆ. ಟೆಕ್ನಿಕಲ್ ಎವಿಡೆನ್ಸ್ ಹುಡುಕುತ್ತಿದ್ದಾರೆ. ಇದಾಗ್ಯೂ ಕಾಡುಗೋಡಿ ಹಾಗೂ ದಾಬಸ್ ಪೇಟೆ ಪೊಲೀಸ್ರಿಂದ ತನಿಖೆ ಮುಂದುವರಿದ್ದು, ಖಾಕಿಗೆ ಈ ಕೇಸ್ ದೊಡ್ಡ ತಲೆನೋವಾಗಿದೆ.
ಅದ್ವೈತ್ ಹುಡುಕಿಕೊಂಡು ಬಾರದ ಕುಟುಂಬ
ಅದ್ವೈತ್ ನಾರ್ಥ್ ಇಂಡಿಯಾ ಮೂಲದವರು. ಈತ ನಾಪತ್ತೆಯಾಗಿರುವ ಸುದ್ದಿ ಕಳೆದ ಏಳು ದಿನಗಳಿಂದ ನ್ಯೂಸ್, ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಲೇ ಇದೆ. ಇಷ್ಟೆಲ್ಲಾ ಆದರೂ ಯಾರೂ ಅದ್ವೈತ್‌ನನ್ನು ಹುಡುಕಿಕೊಂಡು ಬಂದಿಲ್ಲ. ಪೋಷಕರು, ಸಂಬಂಧಿಕರು, ಸ್ನೇಹಿತರು ಯಾರೊಬ್ಬರೂ ಶಿವಗಂಗೆ ಬೆಟ್ಟದ ಬಳಿಯಾಗಲಿ, ಠಾಣೆಯ ಬಳಿಯಾಗಲಿ ಬಂದಿಲ್ಲ. ಅದ್ವೈತ್ ಎಲ್ಲರಿಂದ ದೂರವಾಗಿ ಆತ್ಮಹತ್ಯಗೆ ಶರಣಾಗಲು ಬೆಟ್ಟಕ್ಕೆ ಬಂದಿದ್ದನಾ ಎನ್ನುವ ಅನುಮಾನ ಆರಂಭವಾಗಿದೆ. ಇದರ ಜೊತೆ ಆತ ಎಐ ಜೊತೆ ಸಂಭಾಷಣೆ ನಡೆಸುವ ವೇಳೆ ಬೆಟ್ಟದ ಮೇಲಿಂದ ಬಿದ್ದರೆ ಏನಾಗುತ್ತದೆ ಎನ್ನುವ ಪ್ರಶ್ನೆಯನ್ನು ಕೇಳಿ ಉತ್ತರ ತಿಳಿದುಕೊಂಡಿದ್ದಾರೆ ಅನ್ನೋದು ಪ್ರಮುಖ ಅಂಶವಾಗಿದೆ.



