ಹೊಸದಿಗಂತ ವರದಿ ಬಳ್ಳಾರಿ:
89ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ ವಿಜಯನಗರ ಜಿಲ್ಲಾ ಕೇಂದ್ರದಲ್ಲಿ ಆ.15ರಂದು ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ನನಗೆ ಸಮಯವಿಲ್ಲ, ನಾನಾ ಕಾರಣಗಳಿಂದ ನನಗೆ ಆಗುತ್ತಿಲ್ಲ ಇದರಿಂದ ನನಗೆ ವಿನಾಯತಿ ನೀಡಿ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಸಿ.ಎಂ. ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದಿರುವುದು ನಾಚಿಕೆಗೇಡಿತನ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯದಿನಾಚರಣೆಯನ್ನು ಹಬ್ಬದಂತೆ ಪ್ರತಿಯೊಬ್ಬರು ಆಚರಿಸುತ್ತಾರೆ, ಆಚರಿಸಬೇಕು. ಆದರೆ, ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು, ಇದರಿಂದ ನನಗೆ ವಿನಾಯತಿ ನೀಡಿ ಎಂದು ಸಿ.ಎಂ.ಡಿ.ಕೆ.ಶಿವಕುಮಾರ ಅವರಿಗೆ ಅಧಿಕೃತ ಪತ್ರ ಬರೆದಿದ್ದು, ಸಚಿವರು ದೇಶದ್ರೋಹಿ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ ಎಂದು ಪ್ರಶ್ನಿಸಿದ್ದಾರೆ.
ಈ ಬೆಳವಣಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಜವಾದ ಮುಖ ಬಣ್ಣ ಬಯಲಾಗಿದೆ. ನನಗೆ ಧ್ವಜಾರೋಹಣ ಮಾಡಲು ಸಮಯವಿಲ್ಲ, ಸ್ಥಳೀಯ ಸಂಸ್ಥೆಗಳ ಚುನಾವಣೆ, ಉಪ ಚುನಾವಣೆ ಸೇರಿದಂತೆ ಪಕ್ಷ ಸಂಘಟನೆಯಲ್ಲಿ ಬ್ಯುಸಿ ಆಗಿರುವೆ, ಎಂದು ನೆಪ ಹೇಳಿರುವುದು ಖಂಡನೀಯ. ಪವಿತ್ರ ರಾಷ್ಟ್ರ ಧ್ವಜಾರೋಹಣ ನೆರವೇರಿಸಲು ಮನಸ್ಸಿಲ್ಲದ ಈ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ, ಒಬ್ಬ ಜವಾಬ್ದಾರಿಯುತ ಸಚಿವರಿದ್ದಾರೆ ಎಂಬುದು ಹೇಳಲಿಕ್ಕೂ ಸಾಧ್ಯವಾಗುತ್ತಿಲ್ಲ. ಸ್ವಾತಂತ್ರ್ಯ ದಿನಾಚರಣೆಯಂದು ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸುವ ಪವಿತ್ರ ಕರ್ತವ್ಯಕ್ಕಿಂತ ಸಚಿವರಿಗೆ ಪಕ್ಷ ಸಂಘಟನೆ, ಚುನಾವಣೆ, ರಾಜಕೀಯವೇ ದೊಡ್ಡದಾಯಿತೇ ಎಂದು ಪ್ರಶ್ನಿಸಿದ್ದಾರೆ.



