ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳ ಮೂಲಕ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಗಾಂಧಿ ಸ್ಮಾರಕಗಳ ಅಭಿವೃದ್ಧಿ, ರಸ್ತೆ ಹಾಗೂ ಮೂಲಸೌಕರ್ಯ ಸುಧಾರಣೆ, ಪರಿಶಿಷ್ಟ ಜಾತಿಯವರಿಗೆ ನಿವೇಶನ ಹಂಚಿಕೆ ಮತ್ತು ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ನಗರದ ಕ್ರೀಡಾ ಇಲಾಖೆ ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಮಹಾತ್ಮ ಗಾಂಧೀಜಿ ಸ್ಮಾರಕಗಳು ಹಾಗೂ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಗಳ ಸಮನ್ವಯದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು. ಗಾಂಧೀಜಿ ಅವರ ವಿಚಾರಧಾರೆ ಹಾಗೂ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಸ್ಮಾರಕಗಳ ಅಭಿವೃದ್ಧಿ ಅಗತ್ಯವಾಗಿದೆ ಎಂದು ತಿಳಿಸಿದರು.
ರಸ್ತೆ, ಚರಂಡಿ ಕಾಮಗಾರಿಗಳಿಗೆ ವೇಗ
ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧ ಭಾಗಗಳಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಬೇಕಿದೆ. ಕುಡಿಯುವ ನೀರು, ಸ್ವಚ್ಛತೆ, ಒಳಚರಂಡಿ ಹಾಗೂ ರಸ್ತೆ ಸಮಸ್ಯೆಗಳ ಕುರಿತು ಮಹಾನಗರ ಪಾಲಿಕೆ ಸಭೆಗಳಲ್ಲಿ ನಿಯಮಿತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗಡಿ ವಿಚಾರದಲ್ಲಿ ಸರ್ಕಾರದ ನಿಲುವು ಸ್ಪಷ್ಟ
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು, ಗಡಿ ವಿಚಾರದಲ್ಲಿ ರಾಜ್ಯದ ನಿಲುವು ಸ್ಪಷ್ಟವಾಗಿದೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಕನ್ನಡಿಗರ ಹಿತಾಸಕ್ತಿಗೆ ಸರ್ಕಾರ ಬದ್ಧವಾಗಿದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಇದನ್ನೂ ಓದಿ:
ಜಮೀರ್ ಹೇಳಿಕೆ ಕುರಿತು ಪ್ರತಿಕ್ರಿಯೆ
ಸ್ವಾತಂತ್ರ್ಯೋತ್ಸವದ ಧ್ವಜಾರೋಹಣಕ್ಕೆ ಸಂಬಂಧಿಸಿದ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಷ್ಟ್ರೀಯ ಧ್ವಜಕ್ಕೆ ಎಲ್ಲರೂ ಗೌರವ ನೀಡಬೇಕು. ರಾಷ್ಟ್ರೀಯ ಮಹತ್ವದ ಕಾರ್ಯಕ್ರಮಗಳಲ್ಲಿ ಪಕ್ಷಾತೀತವಾಗಿ ಜವಾಬ್ದಾರಿಯಿಂದ ನಡೆದುಕೊಳ್ಳುವುದು ಅಗತ್ಯ ಎಂದರು.
ಎಸ್ಸಿ ಫಲಾನುಭವಿಗಳಿಗೆ ನಿವೇಶನ
ಪರಿಶಿಷ್ಟ ಜಾತಿಯ ಅರ್ಹ ಫಲಾನುಭವಿಗಳಿಗೆ ನಿವೇಶನ ಒದಗಿಸುವ ನಿಟ್ಟಿನಲ್ಲಿ ರಾಜ್ಯದ 10 ಕಡೆಗಳಲ್ಲಿ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ವಸತಿ ರಹಿತ ಬಡ ಕುಟುಂಬಗಳಿಗೆ ಪಾರದರ್ಶಕವಾಗಿ ನಿವೇಶನ ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಕೈಗಾರಿಕೆಗಳಿಗೆ ಆದ್ಯತೆ
ಜಿಲ್ಲೆಯ ಕೈಗಾರಿಕಾ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದ್ದು, ಪ್ರತಿ 25 ಕಿ.ಮೀ. ಅಂತರದಲ್ಲಿ ಕನಿಷ್ಠ ಒಂದು ಕೈಗಾರಿಕಾ ಘಟಕ ಸ್ಥಾಪಿಸುವ ರೀತಿಯಲ್ಲಿ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ಇದೆ. ಇದರಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ ಎಂದರು.
ಭಾನುವಾರ ಯರಗಟ್ಟಿ, ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳಿಗೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ಶಾಸಕ ಆಸೀಪ್ ಸೇಠ್, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷ ಸುನೀಲ ಹನುಮಣ್ಣವರ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ್ ಬೊರಸೆ ಹಾಗೂ ಜಿಪಂ ಸಿಇಒ ರಾಹುಲ್ ಶಿಂಧೆ ಉಪಸ್ಥಿತರಿದ್ದರು.



