August 15, 2026
Saturday, August 15, 2026
spot_img

ಕರ್ನಾಟಕ ಪರ ಗೊತ್ತುವಳಿಗೆ ಆಗ್ರಹ: ಕನ್ನಡಪರ ಸಂಘಟನೆಗಳ ಮನವಿಗೆ ಸತೀಶ್ ಜಾರಕಿಹೊಳಿ ಸ್ಪಂದನೆ

ಹೊಸದಿಗಂತ ವರದಿ ಬೆಳಗಾವಿ:

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಅಂಗೀಕರಿಸಬೇಕೆಂದು ಕಳೆದ ಐದು ತಿಂಗಳಿಂದ ಸಮಾನ ಮನಸ್ಕ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಕುರಿತು ತಾವು ಹಾಗೂ ನಗರಾಭಿವೃದ್ಧಿ ಖಾತೆ ಸಚಿವರೊಂದಿಗೆ ಈಗಾಗಲೇ ಚರ್ಚೆ ನಡೆಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕನ್ನಡಪರ ಸಂಘಟನೆಗಳ ಮುಖಂಡರಿಗೆ ತಿಳಿಸಿದರು.

ಸ್ವಾತಂತ್ರ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಶನಿವಾರ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸಮಾರಂಭದ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚೆ ನಡೆಸಿರುವುದಾಗಿ ತಿಳಿಸಿದ ಸಚಿವರು, ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಕಳೆದ ಮೇ 13ರಂದು ಪಾಲಿಕೆಯ ಸಭೆ ನಡೆದ ಬಳಿಕ ಯಾವುದೇ ಪರಿಷತ್ ಸಭೆ ನಡೆದಿಲ್ಲ. ಇದರಿಂದ ಪಾಲಿಕೆಯಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ಉಂಟಾಗಿದ್ದು, ಪಾಲಿಕೆಯನ್ನು ಸೂಪರ್ಸೀಡ್ ಮಾಡಬೇಕೆಂದು ಮುಖಂಡರು ಸಚಿವರನ್ನು ಒತ್ತಾಯಿಸಿದರು.

ಆಗಸ್ಟ್ 18ರಂದು ಪಾಲಿಕೆಯ ಸಭೆ ಕರೆಯಲಾಗಿದ್ದು, ಸಭೆಯ ಕಲಾಪ ಪಟ್ಟಿಯಲ್ಲಿ ಕರ್ನಾಟಕ ಪರವಾದ ಗೊತ್ತುವಳಿ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಗೊತ್ತುವಳಿಯನ್ನು ಸೇರಿಸದೆ ಸಭೆ ನಡೆಸಿದರೆ ಕನ್ನಡ ಸಂಘಟನೆಗಳು ಪರಿಷತ್ ಸಭಾಂಗಣಕ್ಕೆ ನುಗ್ಗಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮುಖಂಡರು ಸಚಿವರಿಗೆ ಎಚ್ಚರಿಕೆ ನೀಡಿದರು.

ಬೆಳಗಾವಿಗೆ ಮುಖ್ಯಮಂತ್ರಿಗಳು ಭೇಟಿ ನೀಡಿದ ಸಂದರ್ಭದಲ್ಲಿ ಮಹಾಪೌರರು ‘ಪ್ರಥಮ ಪ್ರಜೆ’ಯಾಗಿ ಮುಖ್ಯಮಂತ್ರಿಗಳನ್ನು ಸ್ವಾಗತಿಸುವುದು ಸತ್ ಸಂಪ್ರದಾಯವಾಗಿದೆ. ಈ ಹಿಂದೆ ಎಂಇಎಸ್ ಗೆ ಸೇರಿದ ಮಹಾಪೌರರು ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳನ್ನು ಸ್ವಾಗತಿಸಿದ ಉದಾಹರಣೆಗಳಿವೆ. ಆದರೆ, ಪ್ರಸ್ತುತ ಪಾಲಿಕೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ಪಕ್ಷದ ಮಹಾಪೌರರು ಮತ್ತು ಉಪ ಮಹಾಪೌರರು ಈ ಸತ್ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ ಎಂದು ಅಸಮಾಧಾನ ಹೋರ ಹಾಕಿದರು.

ಇದನ್ನೂ ಓದಿ:

ಅಗತ್ಯವಿದ್ದರೆ ಬೆಂಗಳೂರಿಗೆ ತೆರಳಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಕನ್ನಡ ಮುಖಂಡರು ಸಿದ್ಧರಿದ್ದಾರೆ ಎಂದು ಸಚಿವರಿಗೆ ತಿಳಿಸಿದರು.

ಜುಲೈ 28ರಂದು ಬೆಳಗಾವಿಗೆ ಭೇಟಿ ನೀಡಿದ್ದ ನಗರಾಭಿವೃದ್ಧಿ ಖಾತೆ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಕರ್ನಾಟಕ ಪರವಾದ ಗೊತ್ತುವಳಿ ಕುರಿತು ಪಾಲಿಕೆಗೆ ಸರ್ಕಾರದ ವತಿಯಿಂದ ಸೂಚನೆ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೆ ಯಾವುದೇ ಸೂಚನೆ ಬಂದಿಲ್ಲ ಎಂಬುದನ್ನೂ ಸಚಿವ ಸತೀಶ ಜಾರಕಿಹೊಳಿ ಅವರ ಗಮನಕ್ಕೆ ತರಲಾಯಿತು.

ಸಚಿವರ ಭರವಸೆಯನ್ನು ಸ್ವಾಗತಿಸಿರುವ ಕನ್ನಡಪರ ಸಂಘಟನೆಗಳು, ಪಾಲಿಕೆಯ ವಿರುದ್ಧದ ಪ್ರತಿಭಟನೆಗಳನ್ನು ಮುಂದುವರಿಸಲು ನಿರ್ಧರಿಸಿವೆ. ಅಗತ್ಯವಿದ್ದರೆ ಆಗಸ್ಟ್ 20ರ ಬಳಿಕ ಬೆಂಗಳೂರಿಗೆ ನಿಯೋಗ ಕೊಂಡೊಯ್ಯಲು ಸಭೆಯಲ್ಲಿ ನಿರ್ಣಯಿಸಲಾಗಿದೆ.

ಈ ವೇಳೆ ಕನ್ನಡಪರ ಹಿರಿಯ ಹೋರಾಟಗಾರ ಅಶೋಕ ಚಂದರಗಿ, ಮಹಾದೇವ ತಳವಾರ, ಬಲರಾಮ ಮಾಸೇನಟ್ಟಿ, ರಾಜು ಕೋಲಾ, ನ್ಯಾಯವಾದಿ ಆರ್.ಪಿ. ಪಾಟೀಲ, ಸಂತೋಷ ಮಾಸೇನಟ್ಟಿ, ಆನಂದ ಬಿಲಾವರ, ಸಯ್ಯದ್ ಮನ್ಸೂರ್, ಮಹೇಶ ಸಿಗಿಹಳ್ಳಿ, ಸಂತೋಷ ತಳ್ಳಿಮನಿ, ಸಾಗರ್ ಪೂಜಾರಿ, ಎಸ್.ಎಸ್. ಮೂಕನವರ, ಲಕ್ಷ್ಮಣ ಲಮಾಣಿ, ಮೈನು ಮಕಾನದರ ಸೇರಿದಂತೆ ಹಲವು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !