ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ ಭಾರತೀಯ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಬಸ್ ಮೇಲೆ ಕೆಲವು ಪ್ರತಿಭಟನಾಕಾರರು ದಾಳಿ ನಡೆಸಿದ್ದಾರೆ. ಕೆಲವರಿಗೆ ಗಾಯಗಳಾಗಿವೆ.
ಈ ಘಟನೆ ಭಾರತ-ನೇಪಾಳ ಗಡಿಯಲ್ಲಿರುವ ಉತ್ತರ ಪ್ರದೇಶದ ಸೋನೌಲಿ ಬಳಿ ನಡೆದಿದೆ. ಈ ಬಸ್ 49 ಭಾರತೀಯ ಪ್ರಜೆಗಳನ್ನು ಕರೆದೊಯ್ಯುತ್ತಿತ್ತು. ಈ ವೇಳೆ ಬಸ್ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಈ ಘಟನೆಯಲ್ಲಿ ಮಹಿಳೆಯರು ಮತ್ತು ವೃದ್ಧರು ಸೇರಿದಂತೆ ಅನೇಕ ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಕಠ್ಮಂಡುವಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ನಲ್ಲಿದ್ದ ಪ್ರವಾಸಿಗರು ಕಠ್ಮಂಡುವಿನ ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ವಾಪಾಸ್ ಹಿಂತಿರುಗುತ್ತಿದ್ದರು ಎನ್ನಲಾಗಿದೆ.
ಆ ಬಸ್ ಮೇಲಿನ ದಾಳಿಯ ನಂತರ, ನೇಪಾಳ ಸರ್ಕಾರದ ಸಹಾಯದಿಂದ ಭಾರತೀಯ ರಾಯಭಾರ ಕಚೇರಿ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಪ್ರವಾಸಿಗರನ್ನು ಭಾರತಕ್ಕೆ ಕರೆತರಲಾಯಿತು.
‘ನಾವು ಪಶುಪತಿನಾಥ ದೇವಸ್ಥಾನದಲ್ಲಿ ದರ್ಶನ ಪಡೆದು ಹಿಂತಿರುಗುತ್ತಿದ್ದಾಗ, ಇದ್ದಕ್ಕಿದ್ದಂತೆ ಒಂದು ಗುಂಪು ನಮ್ಮ ಬಸ್ಸನ್ನು ಸುತ್ತುವರೆದು ಕಾರಣವಿಲ್ಲದೆ ದಾಳಿ ಮಾಡಿತು. ಪ್ರಯಾಣಿಕರಲ್ಲಿ ಮಹಿಳೆಯರು ಮತ್ತು ವೃದ್ಧರು ಇದ್ದರು. ಆದರೆ ಪ್ರತಿಭಟನಾಕಾರರು ಅದನ್ನು ಲೆಕ್ಕಿಸಲಿಲ್ಲ’ ಎಂದು ಬಸ್ ಚಾಲಕ ರಾಮು ನಿಶಾದ್ ತಿಳಿಸಿದ್ದಾರೆ.