ಹೊಸದಿಗಂತ ಡಿಜಿಟಲ್ ಡೆಸ್ಕ್;
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಎಂ. ಕರುಣಾನಿಧಿ ಅವರ ಹೆಸರನ್ನು ಗೌರವ ಸೂಚಕ ಪದಗಳಿಲ್ಲದೆ ನೇರವಾಗಿ ಪ್ರಸ್ತಾಪಿಸಿದ ಸಚಿವರ ನಡೆಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಸೋಮವಾರ ವಿಧಾನಸಭೆಯಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಸಚಿವರ ಈ ಹೇಳಿಕೆಗೆ ವಿರೋಧ ಪಕ್ಷ ಡಿಎಂಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಸೃಷ್ಟಿಸಿದ ಬೆನ್ನಲ್ಲೇ ಮುಖ್ಯಮಂತ್ರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ.
ಘಟನೆಯ ಹಿನ್ನೆಲೆ
ವಿಧಾನಸಭೆಯಲ್ಲಿ ಸೋಮವಾರ ಆರೋಗ್ಯ ಮತ್ತು ಕಂದಾಯ ಇಲಾಖೆಯ ಅನುದಾನದ ಮೇಲಿನ ಚರ್ಚೆ ನಡೆಯುತ್ತಿತ್ತು. ಈ ವೇಳೆ ಮಾತನಾಡುತ್ತಿದ್ದ ಅರಣ್ಯ ಸಚಿವ ಆರ್.ವಿ. ರಂಜಿತ್ ಕುಮಾರ್ ಅವರು, ಈ ಹಿಂದಿನ ಚುನಾವಣೆಗಳಲ್ಲಿ ನಡೆದಿದ್ದ ‘ನೋಟಿಗೆ ವೋಟು’ ಪದ್ಧತಿಯನ್ನು ಟೀಕಿಸಿದರು. ತಮ್ಮ ಕಾಂಚೀಪುರಂ ಕ್ಷೇತ್ರದಲ್ಲಿ ಈ ಹಿಂದೆ ಒಂದು ಮತಕ್ಕೆ 1,500 ರೂಪಾಯಿವರೆಗೆ ಹಣ ಹಂಚಲಾಗಿತ್ತು ಎಂದು ಆರೋಪಿಸಿದ ಸಚಿವರು, ಈಗಿನ ತಮ್ಮ ಸರ್ಕಾರ ಯಾವುದೇ ಹಣದ ಆಮಿಷವಿಲ್ಲದೆ ಅಧಿಕಾರಕ್ಕೆ ಬಂದಿದೆ ಎಂದು ಹೆಮ್ಮೆಯಿಂದ ಹೇಳಿದರು.
ಶಿಷ್ಟಾಚಾರ ಉಲ್ಲಂಘನೆ
ಹಿಂದಿನ ಚುನಾವಣೆಗಳ ತಂತ್ರಗಳನ್ನು ಪಟ್ಟಿ ಮಾಡುವ ಸಂದರ್ಭದಲ್ಲಿ, ಸಚಿವ ರಂಜಿತ್ ಕುಮಾರ್ ಅವರು ಡಿಎಂಕೆ ಹಿರಿಯ ನಾಯಕ ಕರುಣಾನಿಧಿ ಅವರ ಹೆಸರನ್ನು ಕೇವಲ ‘ಕರುಣಾನಿಧಿ’ ಎಂದು ನೇರವಾಗಿ ಉಲ್ಲೇಖಿಸಿದರು. ತಮಿಳುನಾಡು ವಿಧಾನಸಭೆಯ ಸಂಪ್ರದಾಯದ ಪ್ರಕಾರ ಹಿರಿಯ ನಾಯಕರನ್ನು ‘ಕಲೈಂಜರ್’ ಅಥವಾ ‘ಮಾಜಿ ಮುಖ್ಯಮಂತ್ರಿ’ ಎಂಬ ಗೌರವದ ಶೀರ್ಷಿಕೆಗಳೊಂದಿಗೆ ಕರೆಯಬೇಕಾಗುತ್ತದೆ. ಸಚಿವರು ಈ ಶಿಷ್ಟಾಚಾರ ಉಲ್ಲಂಘಿಸಿದ್ದರಿಂದ ಕೆರಳಿದ ಡಿಎಂಕೆ ಸದಸ್ಯರು, ಮಾಜಿ ಸಚಿವ ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ನೇತೃತ್ವದಲ್ಲಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು.
ಇದನ್ನೂ ಓದಿ:
ಮಧ್ಯಪ್ರವೇಶಿಸಿದ ಸಿಎಂ ವಿಜಯ್
ಸದನದಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಿಎಂ ಜೋಸೆಫ್ ವಿಜಯ್ ಅವರು ತಕ್ಷಣವೇ ಸಚಿವರ ಭಾಷಣವನ್ನು ಮಧ್ಯದಲ್ಲೇ ತಡೆದರು. “ನಮ್ಮ ಸಚಿವರು ದಿವಂಗತ ಹಿರಿಯ ನಾಯಕರ ಹೆಸರನ್ನು ಬಳಸಿದ ರೀತಿ ತಪ್ಪು. ಅವರ ಪರವಾಗಿ ನಾನು ಸದನದ ಕ್ಷಮೆಯಾಚಿಸುತ್ತೇನೆ” ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸಿಎಂ ಅವರ ಈ ತಕ್ಷಣದ ಕ್ಷಮೆಯಾಚನೆಯ ನಂತರ ಡಿಎಂಕೆ ಸದಸ್ಯರು ಶಾಂತರಾದರು ಮತ್ತು ಸದನದ ಚರ್ಚೆ ಮರಳಿ ಹಳಿಗೆ ಬಂದಿತು.



