October 11, 2026
Sunday, October 11, 2026
spot_img

ದಾಂಡೇಲಿಯ ಹಸನ್ಮಾಳ ಟಿ.ಆರ್.ಟಿ ಬಳಿ ಕಪ್ಪು ಚಿರತೆ ಪ್ರತ್ಯಕ್ಷ : ಆತಂಕದಲ್ಲಿ ಜನರು

ಹೊಸದಿಗಂತ ವರದಿ ದಾಂಡೇಲಿ :

ನಗರದಿಂದ ಹಸನ್ಮಾಳಕ್ಕೆ ಸಂಪರ್ಕ ಕಲ್ಪಿಸುವ ಟಿ.ಆರ್.ಟಿ ರಸ್ತೆ ಬಳಿ ಕಪ್ಪು ಚಿರತೆಯೊಂದು ಪ್ರತ್ಯಕ್ಷವಾಗಿರುವ ಘಟನೆ ಬುಧವಾರ ನಸುಕಿನ ವೇಳೆ ನಡೆದಿದೆ.

ಟಿ.ಆರ್.ಟಿಯಿಂದ ಹಸನ್ಮಾಳಕ್ಕೆ ಹೋಗುವ ರೈಲ್ವೆ ಹಳಿಯ ಸಮೀಪ ಚಿರತೆ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಕಪ್ಪು ಚಿರತೆಯ ಸಂಚಾರ ಕಂಡುಬರುತ್ತಿದೆ. ಕಳೆದ ಎರಡು ದಿನಗಳ ಹಿಂದೆ ವೆಲ್ಡರ್ ನೆಸ್ಟ್ ಜಂಗಲ್ ಹೋಂ ಸ್ಟೇಗೆ ನುಗ್ಗಿ ಜರ್ಮನ್ ಶಫರ್ಡ್ ತಳಿಯ ನಾಯಿಯೊಂದನ್ನು ಚಿರತೆ ಕೊಂದು ಹಾಕಿತ್ತು.

ಈ ಘಟನೆಗಳಿಂದ ಸ್ಥಳೀಯರ ಸಾಕು ಪ್ರಾಣಿಗಳಿಗೆ ಮತ್ತು ಜಾನುವಾರುಗಳಿಗೆ ತೊಂದರೆಯಾಗುತ್ತಿದ್ದು, ಕಪ್ಪು ಚಿರತೆಯ ಹಾವಳಿಯಿಂದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಈಗಾಗಲೇ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ್ ಕೆ.ಸಿ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್. ಕಳ್ಳಿಮಠ ಅವರ ಮಾರ್ಗದರ್ಶನದಲ್ಲಿ, ವಲಯಾರಣ್ಯಾಧಿಕಾರಿ ಗುರುಪ್ರಸಾದ್ ನೇತೃತ್ವದ ಅರಣ್ಯ ಸಿಬ್ಬಂದಿ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಸ್ಥಳೀಯ ನಿವಾಸಿಗಳಿಗೆ ಎಚ್ಚರಿಕೆ ವಹಿಸುವಂತೆ ಮತ್ತು ರಾತ್ರಿ ವೇಳೆ ಹೊರಗೆ ಓಡಾಡದಂತೆ ಜಾಗೃತಿ ಮೂಡಿಸಲಾಗಿದೆ.

ಕಪ್ಪು ಚಿರತೆಯ ದಾಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ರಾತ್ರಿ ವೇಳೆ ಒಬ್ಬರೇ ಹೊರಗೆ ಹೋಗದಿರುವುದು, ಮಕ್ಕಳನ್ನು ಮತ್ತು ಸಾಕು ಪ್ರಾಣಿಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

Must Read