ಹೊಸ ದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದಲ್ಲಿ Gen-Z ಪ್ರತಿಭಟನೆಯಿಂದಾಗಿ ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ಈ ಕುರಿತು ನೇಪಾಳದ ಆರೋಗ್ಯ ಸಚಿವಾಲಯ ಶುಕ್ರವಾರ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದೆ. ಇವರಲ್ಲಿ 30 ವ್ಯಕ್ತಿಗಳು ಗುಂಡೇಟಿನಿಂದ ಸಾವನ್ನಪ್ಪಿದ್ದರೆ, 21 ಮಂದಿ ಸುಟ್ಟಗಾಯಗಳು ಮತ್ತಿತರ ಗಂಭೀರ ಗಾಯಗಳಿಂದ ಸಾವನ್ನಪ್ಪಿರುವುದಾಗಿ ಸಚಿವಾಲಯ ದೃಢಪಡಿಸಿದೆ.
ಮೃತರಲ್ಲಿ ಓರ್ವ ಭಾರತೀಯ ಪ್ರಜೆ, ಮೂವರು ಪೊಲೀಸ್ ಸಿಬ್ಬಂದಿಯೂ ಸೇರಿದ್ದಾರೆ ಎಂದು ನೇಪಾಳ ಪೊಲೀಸರ ಸಹ ವಕ್ತಾರ ರಮೇಶ್ ಥಾಪಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ಕಠ್ಮಂಡು ಪೋಸ್ಟ್ ವರದಿ ಮಾಡಿದೆ.
ಸೆಪ್ಟೆಂಬರ್ 8, 2025 ರಂದು ತೆರಿಗೆ ಆದಾಯ ಮತ್ತು ಸೈಬರ್ ಸುರಕ್ಷತೆಯ ಕಾರಣದಿಂದ ಸರ್ಕಾರ ಪ್ರಮುಖ ಸೋಶಿಯಲ್ ಮೀಡಿಯಾಗಳನ್ನು ನಿರ್ಬಂಧಿಸಿದ ನಂತರ ಕಠ್ಮಂಡು ಮತ್ತು ಪೋಖರಾ, ಬಟ್ವಾಲ್ ಮತ್ತು ಬಿರ್‌ಗುಂಜ್ ಮತ್ತಿತರ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ತೀವ್ರವಾಯಿತು. ಪರಿಸ್ಥಿತಿ ನಿಯಂತ್ರಿಸಲು ಕಠ್ಮಂಡು ಸೇರಿದಂತೆ ಹಲವು ನಗರಗಳಲ್ಲಿ ಇಂದು ಸಂಜೆಯವರೆಗೂ ಕರ್ಫ್ಯೂ ವಿಧಿಸಲಾಗಿತ್ತು. ಮತ್ತೆ ಸಂಜೆ 7 ರಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಕರ್ಫ್ಯೂ ಹೇರಲಾಗುವುದು ಎಂದು ನೇಪಾಳ ಸೇನೆಯ ಹೇಳಿಕೆ ತಿಳಿಸಿದೆ.