October 11, 2026
Sunday, October 11, 2026
spot_img

ಎಸಿಪಿ ಕಚೇರಿ ಅಂಗಳದ ಮಹಾಲಕ್ಷ್ಮಿ ಕ್ಷೇತ್ರಕ್ಕೆ ಕನ್ನ ಹಾಕಿದ ಕಳ್ಳರು: ದೇವಿಯ ವಿಗ್ರಹದ ಬೆಳ್ಳಿ ಕವಚ, ಕರಿಮಣಿ, ಚಿನ್ನಾಭರಣ ಕಳವು

ಹೊಸದಿಗಂತ ವರದಿ ಉಳ್ಳಾಲ:

ಮಂಗಳೂರು ದಕ್ಷಿಣ ಉಪ ವಿಭಾಗ ಸಹಾಯಕ ಪೊಲೀಸ್ ಆಯುಕ್ತರ (ಎಸಿಪಿ) ಕಚೇರಿಯ ಅಂಗಳದಲ್ಲಿರುವ ಶ್ರೀ ಮಹಾಲಕ್ಷ್ಮಿ-ಗಣಪತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ದೇವಿಯ ವಿಗ್ರಹದ ಬೆಳೆ ಬಾಳುವ ಚಿನ್ನಾಭರಣ, ಬೆಳ್ಳಿ ಕವಚ ದೋಚಿರುವ ಘಟನೆ ಕಲ್ಲಾಪುವಿ‌ನ ಬೊಡಂಗಿಲ ಎಂಬಲ್ಲಿ ನಡೆದಿದೆ.

ಕಲ್ಲಾಪು ಬೊಡಂಗಿಲದಲ್ಲಿರುವ ಎಸಿಪಿಯವರ ಕಚೇರಿ ಕಟ್ಟಡದ ಅಂಗಳದಲ್ಲೇ ಇರುವ ದೇವಸ್ಥಾನದಲ್ಲಿ ಚಿನ್ನಾಭರಣ ಕಳವಾಗಿರುವುದು ಆಘಾತಕಾರಿಯಾಗಿದೆ. ಬುಧವಾರ ತಡರಾತ್ರಿ ದೇವಸ್ಥಾನಕ್ಕೆ ಕನ್ನ ಹಾಕಿದ ಕಳ್ಳರು ಮಹಾಲಕ್ಷ್ಮಿ ವಿಗ್ರಹದ ಕತ್ತಲ್ಲಿದ್ದ ಚಿನ್ನದ ಕರಿಮಣಿ, ಚಿನ್ನದ ಸರ, ಪೆಂಡೆಟ್, ತಾಳಿ ಮತ್ತು ವಿಗ್ರಹದ ಬೆಳ್ಳಿ ಕವಚ ಸೇರಿ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತನ್ನು ದೋಚಿದ್ದಾರೆ. ಗರ್ಭಗುಡಿಯೊಳಗಿದ್ದ ಪಂಚಲೋಹದ ಪ್ರಭಾವಳಿ ಹಾಗೂ ಹಿತ್ತಾಳೆ ಕೊಡವನ್ನ ಕಳ್ಳರು ಅಲ್ಲೇ ಬಿಟ್ಟು ಹೋಗಿದ್ದಾರೆ.


ಬುಧವಾರ ರಾತ್ರಿ ಒಂದು ಗಂಟೆಯವರೆಗೆ ಎಸಿಪಿ ಕಚೇರಿಯಲ್ಲಿ ಸಿಬ್ಬಂದಿಗಳಿದ್ದರೆಂದು ಹೇಳಲಾಗಿದೆ. ಗುರುವಾರ ಮುಂಜಾನೆ 4.30 ಗಂಟೆಗೆ ಪ್ರಧಾನ ಅರ್ಚಕರಾದ ಬಾಲಕೃಷ್ಣ ಭಟ್ ಅವರು ಕ್ಷೇತ್ರಕ್ಕೆ ಪೂಜೆಯ ತಯಾರಿಗೆ ಬಂದಾಗ ಗರ್ಭಗುಡಿಯ ಬೀಗ ಒಡೆದಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಮಹಾಲಕ್ಷ್ಮಿ ಕ್ಷೇತ್ರ, ಎಸಿಪಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳೇ ಇಲ್ಲ

ಕಳವು ನಡೆದಿರುವ ಮಹಾಲಕ್ಷ್ಮಿ ಕ್ಷೇತ್ರ ಹಾಗೂ ಎಸಿಪಿ ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳೇ ಇಲ್ಲದ ಕಾರಣ ಕಳ್ಳರ ಜಾಡು ಹಿಡಿಯುವುದು ಪೊಲೀಸರಿಗೆ ಕಗ್ಗಂಟಾಗಿದೆ. ಊರವರಲ್ಲದೆ ಎಸಿಪಿ ಕಚೇರಿಯ ಪೊಲೀಸ್ ಸಿಬ್ಬಂದಿಗಳು ಕೂಡಾ ತಮ್ಮ ಅಂಗಣದಲ್ಲಿರುವ ಮಹಾಲಕ್ಷ್ಮಿಯನ್ನ ಶ್ರಧ್ಧೆಯಿಂದ ಆರಾಧಿಸುತ್ತಾ ಬಂದಿದ್ದರು. ಪೊಲೀಸರು ಭಕ್ತಿ ಪೂರ್ವಕವಾಗಿ ದೇವಿಗೆ ಪಂಚಲೋಹದ ಪ್ರಭಾವಳಿ ಹಾಗೂ ಚಿನ್ನದ ಆಭರಣಗಳನ್ನೂ ಕೊಡುಗೆಯಾಗಿ ನೀಡಿದ್ದರು. ತಮ್ಮ ಕಚೇರಿ ಅಂಗಣದಲ್ಲೇ ನಡೆದಿರುವ ಕಳ್ಳತನ ಪ್ರಕರಣವು ಎಸಿಪಿ ಕಚೇರಿ ಸಿಬ್ಬಂದಿಗಳನ್ನ ಅಣಕಿಸಿದಂತಿದೆ.

Must Read