ಹೊಸದಿಗಂತ ವರದಿ ಬೆಳಗಾವಿ:
ಬೆಳಗಾವಿ ನಗರದ ಖಾಸಗಿ ಹೋಟೆಲ್ನಲ್ಲಿ ಫೀಪಲ್ಸ್ ಹೆಲ್ತ್ ಕೇರ್ ಟ್ರಸ್ಟ್, ಲೋಕ ಕಲ್ಯಾಣ ಗ್ರಾಮೀಣ ಅಭಿವೃದ್ಧಿ ಸೇವಾ ಸಂಸ್ಥೆ ಹಾಗೂ ಯುವಾಂಶ್ ಎಂಟರ್ಪ್ರೈಸಸ್ ಜಂಟಿ ಆಶ್ರಯದಲ್ಲಿ ಆರೋಗ್ಯ ಜಾಗೃತಿ ಶಿಬಿರ ಹಾಗೂ ಕೃತಕ ಬುದ್ಧಿಮತ್ತೆ (AI) ಆಧಾರಿತ ನೂತನ ಆರೋಗ್ಯ ತಪಾಸಣಾ ಯಂತ್ರದ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜ ಸೇವಕ ವಿಜಯ್ ಮೋರೆ ಸೇರಿದಂತೆ ಹಲವು ಗಣ್ಯರು ದೀಪ ಬೆಳಗಿಸುವ ಮೂಲಕ ಈ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರಕ್ಕೆ ಚಾಲನೆ ನೀಡಿದರು.
ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ವಿಜಯ್ ಮೋರೆ ಅವರು, “ಬೆಳಗಾವಿ ನಗರದಲ್ಲಿ ಇದೇ ಮೊದಲ ಬಾರಿಗೆ AI ತಂತ್ರಜ್ಞಾನ ಆಧಾರಿತ ಆರೋಗ್ಯ ತಪಾಸಣಾ ಯಂತ್ರವನ್ನು ಪರಿಚಯಿಸಲಾಗುತ್ತಿದ್ದು, ಇದು ಸಾರ್ವಜನಿಕರ ದೈನಂದಿನ ಆರೋಗ್ಯ ತಪಾಸಣೆಗೆ ನೆರವಾಗಲಿದೆ. ಸಾಮಾನ್ಯ ಮನೆಗಳಲ್ಲಿ ಒಬ್ಬರು ಅಥವಾ ಇಬ್ಬರು ವೃದ್ಧರಿರುತ್ತಾರೆ. ಆದರೆ ನಮ್ಮ ಆಶ್ರಮದಲ್ಲಿ 45ಕ್ಕೂ ಹೆಚ್ಚು ವೃದ್ಧರಿದ್ದು, ಅವರಿಗೆ ಆಗಾಗ್ಗೆ ಎದುರಾಗುವ ಅನಾರೋಗ್ಯದ ಸಮಸ್ಯೆಗಳನ್ನು ತಡೆಗಟ್ಟಲು ಮತ್ತು ಪೂರ್ವಭಾವಿ ಮುನ್ನೆಚ್ಚರಿಕೆ ವಹಿಸಲು ಈ ತಂತ್ರಜ್ಞಾನವು ಅತ್ಯಂತ ಸಹಕಾರಿಯಾಗಲಿದೆ” ಈ ಪ್ರಯೋಜನವನ್ನು ಜನತೆಯು ಪಡೆದುಕೊಂಡು ಆರೋಗ್ಯ ಸದೃಢವಾಗಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ:
ಈ ವೇಳೆ ಡಾ. ಸಿದ್ದನ್ನವರ್ ಅವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ, ಅಸಮರ್ಪಕ ಆಹಾರ ಪದ್ಧತಿ ಹಾಗೂ ಆರೋಗ್ಯದ ಕುರಿತು ವಹಿಸಬೇಕಾದ ಅಗತ್ಯ ಜಾಗೃತಿಯ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ರೋಗರುಜಿನಗಳು ಹೆಚ್ಚುತ್ತಿವೆ. ಈ ನೂತನ AI ಯಂತ್ರದ ಮೂಲಕ ದೇಹದ ವಿವಿಧ ಆರೋಗ್ಯ ಏರುಪೇರುಗಳನ್ನು ಅತ್ಯಂತ ಸರಳವಾಗಿ ಹಾಗೂ ಶೀಘ್ರವಾಗಿ ಪತ್ತೆಹಚ್ಚಬಹುದಾಗಿದೆ. ಸಾರ್ವಜನಿಕರು ಈ ಉಚಿತ ಸೇವಾ ಸೌಲಭ್ಯದ ಸದುಪಯೋಗ ಪಡೆದುಕೊಂಡು ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಸಂಜಯ್ ಸಿದ್ದನ್ನವರ್, ಶೀತಲ್ ಮೆಕಲಮರಡಿ, ಮಲ್ಲಿಕಾರ್ಜುನ ಕೋರ್ಬನ್, ಸರ್ಕಾರಿ ನೌಕರರ ಬೆಳಗಾವಿ ಜಿಲ್ಲಾ ಅಧ್ಯಕ್ಷ ಬಸವರಾಜ ರಾಯವ್ವಗೋಳ, ಅಖಿಲ್ ಪೆಟ್ಕರ್, ಫೀಪಲ್ಸ್ ಹೆಲ್ತ್ ಕೇರ್ ಜಿಲ್ಲಾ ಸಂಯೋಜಕರು, ಸಂಸ್ಥೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



