ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಅದೆಷ್ಟೋ ಜನ ಹೆಂಡತಿ ತೀರಿಕೊಂಡ ಕೆಲವೇ ದಿನಗಳಲ್ಲಿ ಮತ್ತೊಂದು ಮದುವೆಯಾಗಿ ಸಂತೋಷವಾಗಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಮಡದಿ ತೀರಿಹೋಗಿ 8 ವರ್ಷಗಳಾದರೂ ಅವಳ ನೆನಪಿನಲ್ಲೇ ಜೀವನ ಸಾಗಿಸುತ್ತಿರುವುದನ್ನು ನೋಡಿದರೆ, ಎಂಥವರೂ ಒಂದು ಕ್ಷಣ ಮೂಕವಿಸ್ಮಿತರಾಗುತ್ತಾರೆ.
ʼನಿಜವಾದ ಪ್ರೀತಿಗೆ ಎಂದೂ ಸಾವಿಲ್ಲʼ
ನಿಜವಾದ ಪ್ರೀತಿಗೆ ಎಂದೂ ಸಾವಿಲ್ಲ ಎಂಬುದಕ್ಕೆ ಬೆಂಗಳೂರಿನ ಈ ಆಟೋ ಚಾಲಕನೇ ಸಾಕ್ಷಿಯಾಗಿದ್ದಾರೆ. ತೀರಿಕೊಂಡ ತಮ್ಮ ಪ್ರೀತಿಯ ಹೆಂಡತಿಯ ನೆನಪಿಗಾಗಿ ಇವರು ಕಳೆದ ಎಂಟು ವರ್ಷಗಳಿಂದ ಒಂದು ಮೌನ ಆಚರಣೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿದಿನ ತಮ್ಮ ಆಟೋವನ್ನು ಹೂವುಗಳಿಂದ ಅಲಂಕರಿಸಿ, ಹೆಂಡತಿಯ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡು ಇವರು ಆಟೋ ಚಲಾಯಿಸುತ್ತಿದ್ದಾರೆ.
https://www.instagram.com/reel/DaLTCOuJaWn/?igsi=OXduMHdvZG9sbzk=
ಭಾವುಕ ವಿಡಿಯೋ ವೈರಲ್
ಇತ್ತೀಚೆಗೆ ಸೂರಜ್ ಎಸ್ ಕುರುಪ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ಹಿರಿಯ ಆಟೋ ಚಾಲಕನ ಭಾವುಕ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರಸ್ತೆಯಲ್ಲಿ ಹೋಗುವಾಗ ಆಟೋದ ಮುಂಭಾಗದಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಹೂವುಗಳನ್ನು ಗಮನಿಸಿದ ಸೂರಜ್, ಆಟೋ ಹತ್ತಿ ಈ ಹೂವುಗಳು ಯಾರಿಗಾಗಿ ಎಂದು ಚಾಲಕರನ್ನು ಕೇಳಿದ್ದಾರೆ. ಅದಕ್ಕೆ ಆ ಹಿರಿಯ ಜೀವ ಮುಗುಳ್ನಗುತ್ತಾ ತಮ್ಮ ಪಕ್ಕದಲ್ಲಿದ್ದ ಹೆಂಡತಿಯ ಫೋಟೋವನ್ನು ತೋರಿಸಿ, ʼಇವಳಿಗಾಗಿ, ಇವಳು ತೀರಿಕೊಂಡು ಎಂಟು ವರ್ಷಗಳಾಗಿವೆʼ ಎಂದು ಕಣ್ಣಾಲಿಗಳು ತುಂಬಿ ಬರುವಂತೆ ಹೇಳಿದ್ದಾರೆ.
ʼಮನೆಯಲ್ಲಿ ಸುಮ್ಮನೆ ಇದ್ದರೆ ಅವಳ ನೆನಪು ಕಾಡುತ್ತೆʼ
ತಮಗೆ ಒಬ್ಬ ಮಗ, ಮಗಳು ಮತ್ತು ಆರು ಜನ ಮೊಮ್ಮಕ್ಕಳಿದ್ದಾರೆ ಎಂದು ಚಾಲಕರು ತಮ್ಮ ಪರಿಚಯವನ್ನು ಹೇಳಿಕೊಂಡಿದ್ದಾರೆ. ಹಾಗಿದ್ದರೂ ಮನೆಯಲ್ಲಿ ವಿಶ್ರಾಂತಿ ಪಡೆಯದೆ ಈ ವಯಸ್ಸಿನಲ್ಲೂ ಆಟೋ ಏಕೆ ಓಡಿಸುತ್ತಿದ್ದೀರಿ ಎಂದು ಕೇಳಿದಾಗ, ʼಮನೆಯಲ್ಲಿ ಸುಮ್ಮನೆ ಕುಳಿತರೆ ಅವಳ ನೆನಪುಗಳು ಜಾಸ್ತಿ ಕಾಡುತ್ತವೆ. ಅದಕ್ಕೆ ಪ್ರತಿದಿನ ಆಟೋ ಓಡಿಸುತ್ತಾ ಸಿಗುವ ಜನರೊಂದಿಗೆ ಮಾತನಾಡುತ್ತಿದ್ದರೆ ಮನಸ್ಸು ಬೇರೆಡೆ ಇರುತ್ತದೆ. ಎಂದು ಭಾವುಕರಾಗಿ ಉತ್ತರಿಸಿದ್ದಾರೆ. ಪ್ರತಿದಿನ ಬೆಳಗ್ಗೆ ಎದ್ದು ಆಟೋ ಸ್ವಚ್ಛಗೊಳಿಸಿ, ಹೆಂಡತಿಗಾಗಿ ಹೂವು ಮುಡಿಸುವುದು ಇವರ ದಿನಚರಿಯಾಗಿದೆ.
ಈ ಹೃದಯಸ್ಪರ್ಶಿ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಕಣ್ಣುಗಳನ್ನು ಒದ್ದೆಯಾಗಿಸಿದೆ. ಸಾವಿನ ನಂತರವೂ ತನ್ನ ಮಡದಿಯನ್ನು ಇಷ್ಟೊಂದು ಗಾಢವಾಗಿ ಪ್ರೀತಿಸುವ ಜೋಡಿಗಳು ಇಂದಿನ ಕಾಲದಲ್ಲೂ ಇದ್ದಾರಲ್ಲ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.



