ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ರಾಜಕೀಯದಲ್ಲಿ ಮತ್ತೊಮ್ಮೆ ಬದಲಾವಣೆ ಸಂಭವಿಸಿದೆ. ಹಿಂಸಾತ್ಮಕ ಪ್ರತಿಭಟನೆಗಳ ನಡುವೆಯೇ ಕೆ.ಪಿ. ಶರ್ಮಾ ಓಲಿ ಸರ್ಕಾರ ಪತನಗೊಂಡಿದ್ದು, ಮಾಜಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶೆ ಸುಶೀಲಾ ಕರ್ಕಿ ಅವರನ್ನು ಮಧ್ಯಂತರ ಪ್ರಧಾನಿಯಾಗಿ ಆಯ್ಕೆ ಮಾಡಲಾಗಿದೆ. ಈ ಸಂದರ್ಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿ, ಭಾರತವು ನೆರೆಯ ದೇಶದ ಶಾಂತಿ ಮತ್ತು ಅಭಿವೃದ್ಧಿಗೆ ಬದ್ಧವಾಗಿರುವುದಾಗಿ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ X ಪೋಸ್ಟ್‌ನಲ್ಲಿ, “ನೇಪಾಳದ ಮಧ್ಯಂತರ ಸರ್ಕಾರದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಗೌರವಾನ್ವಿತ ಸುಶೀಲಾ ಕರ್ಕಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ನೇಪಾಳದ ಸಹೋದರ ಸಹೋದರಿಯರ ಶಾಂತಿ, ಪ್ರಗತಿ ಮತ್ತು ಸಮೃದ್ಧಿಗೆ ಭಾರತ ಸಂಪೂರ್ಣವಾಗಿ ಬದ್ಧವಾಗಿದೆ” ಎಂದು ಬರೆದಿದ್ದಾರೆ.
ಪ್ರತಿಭಟನೆಗಳಿಂದಾಗಿ ನೇಪಾಳದಲ್ಲಿ ನೂರಾರು ಕೋಟಿ ಮೌಲ್ಯದ ಆಸ್ತಿ ನಾಶವಾಗಿದ್ದು, ಪ್ರವಾಸೋದ್ಯಮ ಸೇರಿದಂತೆ ಹಲವು ಕ್ಷೇತ್ರಗಳು ಹಿನ್ನಡೆ ಅನುಭವಿಸಿವೆ. ಇಂತಹ ಗೊಂದಲದ ಸಮಯದಲ್ಲಿ, ಭ್ರಷ್ಟಾಚಾರ ಮತ್ತು ಭಯೋತ್ಪಾದನೆ ವಿರುದ್ಧ ಗಟ್ಟಿಯಾದ ನಿಲುವು ತಾಳಿದ್ದಕ್ಕಾಗಿ ಸುಶೀಲಾ ಕರ್ಕಿ ಅವರನ್ನು ನಾಯಕತ್ವಕ್ಕೆ ಆಯ್ಕೆ ಮಾಡಲಾಗಿದೆ. 73ನೇ ವಯಸ್ಸಿನಲ್ಲೂ ಅವರು ದೇಶದ ರಾಜಕೀಯದ ಪ್ರಮುಖ ಮುಖವಾಗಿ ಹೊರಹೊಮ್ಮಿದ್ದಾರೆ.
ಸುಶೀಲಾ ಕರ್ಕಿ ಬಿರಾಟ್‌ನಗರದಲ್ಲಿ ಜನಿಸಿ, ಭಾರತದಲ್ಲೂ ವಿದ್ಯಾಭ್ಯಾಸ ಮಾಡಿದ್ದಾರೆ. ಅವರ ಪತಿ ದುರ್ಗಾ ಪ್ರಸಾದ್ ಸುಬೇದಿ ನೇಪಾಳ ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದರು. ಈ ಹಿನ್ನೆಲೆ, ಕರ್ಕಿಯವರಿಗೂ ಭಾರತದೊಂದಿಗೆ ಹತ್ತಿರದ ಸಂಬಂಧವಿದೆ.