ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಮೊಸಳೆಹೊಸಳ್ಳಿ ಗ್ರಾಮದಲ್ಲಿ ನಡೆದ ಗಣೇಶ ಮೆರವಣಿಗೆಯಲ್ಲಿ ನಡೆದ ಘಟನೆ ಹಿನ್ನೆಲೆ ಸ್ಥಳೀಯರು, ವರ್ತಕರು ಅಂಗಡಿಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದು, ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ.
ಹಾಸನದಿಂದ ಹೊಳೆನರಸೀಪುರ ಕಡೆಗೆ ಸಾಗುತ್ತಿದ್ದ ಟ್ರಕ್ ಏಕಾಏಕಿ ಮೆರವಣಿಗೆಯಲ್ಲಿ ಭಾಗವಹಿಸಿದ್ದವರ ಮೇಲೆ ನುಗ್ಗಿದ್ದು, ಈ ದುರಂತದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಮತ್ತು 20ಕ್ಕೂ ಅಧಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ ಕೆಲವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 7 ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮೆರವಣಿಗೆ ಗ್ರಾಮದಲ್ಲಿ 25 ವರ್ಷಗಳಿಂದ ಆಚರಿಸಲಾಗುತ್ತಿದ್ದು, ಈ ಬಾರಿ ವಿಶೇಷವಾಗಿ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಾವಿರಾರು ಜನರು ಭಾಗವಹಿಸಿದ್ದಾಗ ಸಂಭವಿಸಿದ ಟ್ರಕ್ ಅಪಘಾತವು ಸ್ಥಳೀಯರನ್ನು ಆಘಾತಕ್ಕೊಳಗಾಗಿಸಿದೆ.
ಸ್ಥಳಕ್ಕೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಮುಂಜಾಗೃತಿಯಂತೆ ಕೆಎಸ್‌ಆರ್‌ಪಿ ತುಕಡಿ ಹಾಜರಿದ್ದಾರೆ. ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಸ್ಥಳೀಯರು, ಶೋಕಜ್ಞಾಪನೆಗಾಗಿ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಈ ಘಟನೆ ಬಗ್ಗೆ ಶಾಸಕರ ಪ್ರತಿಕ್ರಿಯೆ ಬಂದಿದ್ದು, ಶಾಸಕ ಎಚ್‌ಡಿ ರೇವಣ್ಣ ಪೊಲೀಸ್ ವೈಫಲ್ಯದ ಪರಿಣಾಮ ಎಂದು ಆರೋಪಿಸಿದ್ದಾರೆ. ಸಂಸದ ಶ್ರೇಯಸ್ ಪಟೇಲ್ ಕೂಡ ಈ ದುರಂತವನ್ನು “ಕರಾಳ ದಿನ” ಎಂದು ವರ್ಣಿಸಿ, ಸ್ಥಳೀಯ ಪೊಲೀಸ್ ಮತ್ತು ಪ್ರಾಧಿಕಾರಗಳಿಂದ ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ಬೈಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟ್ರಕ್ ಚಾಲಕ ಭುವನೇಶ್ ಗಾಯಗೊಂಡು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.