August 23, 2026
Sunday, August 23, 2026
spot_img

ಪುತ್ತೂರು ‘ಲ್ಯಾಮಿಲೇಶನ್’ ಗಲಾಟೆ: ಇಂದು ಶಾಂತಿಸಭೆ, ಪ್ರಚೋದನಾ ಪೋಸ್ಟ್, ಬಂದ್ ಕರೆ ವಿರುದ್ಧ ಕೇಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:


ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ದರ್ಭೆಯ ಅಂಗಡಿಯೊಂದರಲ್ಲಿ ​ಲ್ಯಾಮಿಲೇಶನ್ ಯಂತ್ರದಲ್ಲಿ ಉಂಟಾದ ತಾಂತ್ರಿಕ ದೋಷವೊಂದರಿಂದ ದಾಖಲೆಯೊಂದು ಹಾನಿಗೊಳಗಾದ ಘಟನೆ ಬಳಿಕ ಉಂಟಾದ ಅಹಿತಕರ ಘಟನೆಗೆ ಸಂಬಂಧಿಸಿ ತನಿಖೆಯು ಸಾಕ್ಷ್ಯಾಧಾರಗಳು ಹಾಗೂ ಕಾನೂನಿನ ಪ್ರಕಾರ ಪಾರದರ್ಶಕವಾಗಿ ನಡೆಯಲಿದ್ದು, ಈ ನಡುವೆ ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡಿಕೊಳ್ಳಬೇಕು ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ. ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚೋದನಕಾರಿ ಸಂದೇಶ, ಬಂದ್‌ಗೆ ಕರೆ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ಧ ಪುತ್ತೂರು ನಗರ ಪೊಲೀಸರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿದ್ದಾರೆ.

ಜಿಲ್ಲೆಯ ಸಾರ್ವಜನಿಕ‌ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ​ಇಂದು (ಆ.23) ಸಂಜೆ 5 ಗಂಟೆಗೆ ಪುತ್ತೂರು ಪೊಲೀಸ್ ಉಪಾಧೀಕ್ಷಕರ ಕಛೇರಿಯಲ್ಲಿ ಶಾಂತಿ ಸಭೆಯನ್ನು ಆಯೋಜಿಸಲಾಗಿದ್ದು, ಯಾವುದೇ ಗೊಂದಲಗಳು, ಆಕ್ಷೇಪಗಳು, ಮಾಹಿತಿಗಳು ಇರುವವರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ವಿನಂತಿ, ಕಳವಳಗಳನ್ನು ಶಾಂತಿಯುತ ಹಾಗೂ ರಚನಾತ್ಮಕ ರೀತಿಯಲ್ಲಿ ವ್ಯಕ್ತಪಡಿಸಲು ಅವಕಾಶವಿದೆ ಎಂದು ಇಲಾಖೆ ಹೇಳಿದೆ.

ಪೊಲೀಸ್ ತನಿಖೆ ನಡೆಯುತ್ತಿರುವ ನಡುವೆಯೂ ಈ ಘಟನೆಯನ್ನು ಕೋಮುವೈಷಮ್ಯದಿಂದ ಬಿಂಬಿಸಿ, ಸಮುದಾಯಗಳ ನಡುವೆ ದ್ವೇಶ ಸೃಷ್ಟಿಸಲು ಕೆಲವರು ಯತ್ನಿಸುತ್ತಿರುವಂತೆ ಕಂಡುಬರುತ್ತಿದ್ದು, ಅಂತವರ ಮೇಲೂ ಕ್ರಮ ಕೈಗೊಳ್ಳಲಾಗುವುದು, ಸಾರ್ವಜನಿಕರು ಯಾವುದೇ ವದಂತಿಗಳ ನೈಜತೆಯನ್ನು ಪರಿಶೀಲಿಸದೇ, ಕೇವಲ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಪ್ರಚೋದನಕಾರಿ ಅಥವಾ ದಾರಿತಪ್ಪಿಸುವ ಹೇಳಿಕೆಗಳಿಗೆ ಮಹತ್ವ ಕೊಡಬಾರದು ಎಂದೂ ಇಲಾಖೆ ನಾಗರಿಕರಲ್ಲಿ ಮನವಿ ಮಾಡಿದೆ.

ಎರಡು ದಿನಗಳ ಹಿಂದೆ ಲ್ಯಾಮಿಲೇಶನ್ ಯಂತ್ರದಲ್ಲಾದ ತಾಂತ್ರಿಕ ದೋಷದಿಂದ ದಾಖಲೆಯೊಂದು ಸುಟ್ಟುಹೋದಾಗ ಈ ಸಮಸ್ಯೆ ಪ್ರಾರಂಭವಾಗಿ, ಆ ಹಂತದಲ್ಲೇ ವಿಷಯವನ್ನು ಶಾಂತಿಯುತವಾಗಿ, ಕಾನೂನಿನ ಮೊರೆಹೋಗಿ ಬಗೆಹರಿಸಿಕೊಳ್ಳಬಹುದಾಗಿತ್ತಾದರೂ ಗ್ರಾಹಕರು ಅಂಗಡಿಯ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದಾರೆ ಎನ್ನಲಾಗಿದ್ದು, ಅಂಗಡಿ ಮಾಲೀಕರಾದ ಅಂಜನಾ‌ ಪೈ ಎಂಬವರೂ ಕೂಡಾ ಗಲಾಟೆಯಲ್ಲಿ ಭಾಗಿಯಾಗಿರುತ್ತಾರೆ. ಘಟನೆಯ ಸಂದರ್ಭದಲ್ಲಿ ಸುದರ್ಶನ್ ಪೈ ಎಂಬವರು ಮಧ್ಯಪ್ರವೇಶಿಸಿ, ಘಟನೆಯನ್ನು ವೀಡಿಯೊ ಚಿತ್ರೀಕರಿಸಲು ಯತ್ನಿಸಿ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುತ್ತಾರೆ. ಲಭ್ಯವಿರುವ ವೀಡಿಯೊ ದೃಶ್ಯಾವಳಿಗಳು ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳ ಬಗ್ಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ಒದಗಿಸುತ್ತವೆ.

​ಸುದರ್ಶನ್ ಪೈ ರವರನ್ನು ಪೋಲಿಸ್ ವಶಕ್ಕೆ ಪಡೆದ ನಂತರವೂ ಕೆಲವು ವ್ಯಕ್ತಿಗಳು ಅತಿರೇಕದಿಂದ ವರ್ತಿಸಿದ್ದು, ಆ ಪೈಕಿ ನೌಶಾದ್ ಎಂಬಾತನು ಪೋಲಿಸ್ ವಾಹನದೊಳಗೆ ಇಣುಕಿ ಏನೋ ಕೃತ್ಯವೆಸಗಿರುವುದು ಕಂಡುಬಂದಿದ್ದು, ಆ ವೇಳೆ ಸದ್ರಿ ಇಲಾಖಾ ವಾಹನದಲ್ಲಿ ಕುಳಿತಿದ್ದ ಸುದರ್ಶನ್ ಪೈ ರವರ ತಂದೆಯವರನ್ನೂ ವಿಚಾರಣೆಗೆ ನಡೆಸುವ ಮೂಲಕ ಹಾಗೂ ಇತರ ಲಭ್ಯವಿರುವ ಸಾಕ್ಷ್ಯಾಧಾರಗಳಿಂದ ಸ್ಪಷ್ಟ ಚಿತ್ರಣ ಸಿಗಲಿದೆ. ಅದರ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

​ಪ್ರಸ್ತುತ ಪ್ರಕರಣದಲ್ಲಿ ಪೋಲಿಸರು ಭಾವನಾತ್ಮಕವಾಗಿ, ಸಾರ್ವಜನಿಕ ಒತ್ತಡ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ತೋರಿಸಲಾಗುವ ದೃಷ್ಟಿಕೋನದ ಆಧಾರದಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಘಟನೆಗೆ ಸಂಬಂಧಿಸಿದ ಸಾಕ್ಷ್ಯಾಧಾರಗಳು, ನೈಜ ಸತ್ಯಾಂಶಗಳ ಆಧಾರದಲ್ಲಿ ಮತ್ತು ಕಾನೂನಿನಲ್ಲಿ ಅನ್ವಯವಾಗುವ ನಿಬಂಧನೆಗಳ ಆಧಾರದಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ.


ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ಕಂಡುಬಂದಾಗ, ಆತನ ಧರ್ಮ, ಸಮುದಾಯ ಅಥವಾ ಸಾಮಾಜಿಕ ಗುರುತನ್ನು ಲೆಕ್ಕಿಸದೆ ಪೋಲಿಸರು ಅಂತಹ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲಿದ್ದು, ಬಂಧನ ಮತ್ತು ಇತರ ಕಾನೂನು ಕ್ರಮಗಳು ಘಟನೆಯ ಸತ್ಯಾಸತ್ಯತೆ, ಸಾಕ್ಷ್ಯಾಧಾರಗಳು ಮತ್ತು ಕಾನೂನಿನ ಅಗತ್ಯತೆಗಳನ್ನು ಆಧರಿಸಿರುತ್ತದೆ. ಸಾರ್ವಜನಿಕರ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿರುವುದಿಲ್ಲ. ​ಪ್ರಸ್ತುತ ನಡೆಯುತ್ತಿರುವ ತನಿಖೆಯ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಅಂತಹವರು ತಮ್ಮಲ್ಲಿರುವ ಸತ್ಯಾಂಶಗಳೊಂದಿಗೆ ಬಂದು ಚರ್ಚಿಸಲು ಮುಕ್ತ ಅವಕಾಶವಿದೆ ಎಂದು ಇಲಾಖೆ ಹೇಳಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !