ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಿಜೋರಾಂನ ಐಜ್ವಾಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ರಾಜ್ಯದ ಮೊದಲ ರೈಲು ಮಾರ್ಗವನ್ನು ಉದ್ಘಾಟಿಸಿದ್ದಾರೆ. ಸೈರಾಂಗ್ ಪಟ್ಟಣದಿಂದ ದೆಹಲಿ, ಗುವಾಹಟಿ ಮತ್ತು ಕೋಲ್ಕತ್ತಾ ಗೆ ಸಂಪರ್ಕ ಕಲ್ಪಿಸುವ ರಾಜಧಾನಿ ಎಕ್ಸ್ಪ್ರೆಸ್, ಸೈರಾಂಗ್-ಗುವಾಹಟಿ ಎಕ್ಸ್ಪ್ರೆಸ್ ಮತ್ತು ಸೈರಾಂಗ್-ಕೋಲ್ಕತ್ತಾ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸುತ್ತಿರುವುದು ಈ ಸಂದರ್ಭದ ಪ್ರಮುಖ ವಿಚಾರವಾಗಿದೆ. ಮಿಜೋರಾಂ ಗುಡ್ಡಗಾಡಿನಿಂದ ಕೂಡಿದ ಪ್ರದೇಶವಾಗಿರುವ ಕಾರಣ, ರೈಲು ಮಾರ್ಗ ನಿರ್ಮಾಣವು ಅತ್ಯಂತ ಸವಾಲಿನ ಕೆಲಸವಾಗಿತ್ತು. ಸುಮಾರು 11 ವರ್ಷಗಳ ಶ್ರಮದ ಬಳಿಕ 8,070 ಕೋಟಿ ರೂ. ವೆಚ್ಚದಲ್ಲಿ ಬೈರಾಬಿ-ಸೈರಾಂಗ್ ರೈಲು ಮಾರ್ಗವನ್ನು ಪೂರ್ಣಗೊಳಿಸಲಾಗಿದೆ. 2015ರಲ್ಲಿ ಪ್ರಾರಂಭವಾದ ಕಾಮಗಾರಿ 2025 ರಲ್ಲಿ ಯಶಸ್ವಿಯಾಗಿ ಮುಗಿಯಿತು.
ಈ ಮಾರ್ಗದಲ್ಲಿ ಎಲ್ಲಾ ಸುರಂಗಗಳಲ್ಲಿ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್ ಅಳವಡಿಸಲಾಗಿದೆ. ಸೇತುವೆಗಳು ಮತ್ತು ಸುರಂಗಗಳನ್ನು ಹೊರತುಪಡಿಸಿ 23.715 ಕಿ.ಮೀ ಮಾರ್ಗವು ಬಯಲು ಪ್ರದೇಶದಲ್ಲಿ ವಿಸ್ತಾರ ಹೊಂದಿದೆ. ಕೆಲವು ಪ್ರದೇಶಗಳಲ್ಲಿ ಮಳೆಯ ಕಾರಣ ಭೂಕುಸಿತ ಸಂಭವಿಸಿದರೆ, ಅದರ ಹಾನಿ ತಡೆಯಲು ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಾಯಿರಾಂಗ್ ಬಳಿ ಇರುವ ಸೇತುವೆ ಸಂಖ್ಯೆ 144 ಕುತುಬ್ ಮಿನಾರ್‌ಗಿಂತ 114 ಮೀಟರ್ ಎತ್ತರದಲ್ಲಿದ್ದು, ಇದು ದೇಶದ ಅತಿ ಎತ್ತರದ ಪಿಯರ್ ರೈಲ್ವೆ ಸೇತುವೆ ಎಂದು ಈಶಾನ್ಯ ಗಡಿನಾಡು ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ಮೋದಿ ಸೆಪ್ಟೆಂಬರ್ 15ರ ವರೆಗೆ ಮಿಜೋರಾಂ ಸೇರಿದಂತೆ ಮಣಿಪುರ, ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ಅವಧಿಯಲ್ಲಿ ಒಟ್ಟು 71,850 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವುದಾಗಿ ಅವರು ಘೋಷಿಸಿದ್ದಾರೆ.