August 25, 2026
Tuesday, August 25, 2026
spot_img

SIR ವಿರುದ್ಧ ಸಮರಕ್ಕೆ ಸಜ್ಜಾದ ಪ್ರಕಾಶ್ ರಾಜ್: ಸೆ.1ರಂದು ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಹಾಗೂ ನಾಗರಿಕ ವಲಯದಲ್ಲಿ ಚರ್ಚೆ ತೀವ್ರವಾಗಿರುವ ಬೆನ್ನಲ್ಲೇ ನಟ ಪ್ರಕಾಶ್ ರಾಜ್ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿದೆ. SIR ಪ್ರಕ್ರಿಯೆಯನ್ನು ಪ್ರಶ್ನಿಸಿರುವ ಅವರು, ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿ ‘ಚುನಾವಣಾ ಆಯೋಗ ಚಲೋ’ ನಡೆಸುವುದಾಗಿ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಮತದಾರರ ಪಟ್ಟಿಯಿಂದ ಅರ್ಹ ನಾಗರಿಕರ ಹೆಸರುಗಳು ಕೈಬಿಡುವ ಸಾಧ್ಯತೆ ಕುರಿತು ಆತಂಕ ವ್ಯಕ್ತಪಡಿಸಿದರು. ಪ್ರಕ್ರಿಯೆಯಲ್ಲಿ ಹಲವು ಲೋಪಗಳಿವೆ ಎಂದು ಆರೋಪಿಸಿದ ಅವರು, SIR ಅನ್ನು ತಕ್ಷಣ ಸ್ಥಗಿತಗೊಳಿಸುವಂತೆ ಚುನಾವಣಾ ಆಯೋಗವನ್ನು ಒತ್ತಾಯಿಸಿದರು.

‘ಒಂದು ತಿಂಗಳಲ್ಲಿ ಇಷ್ಟು ದೊಡ್ಡ ಪ್ರಕ್ರಿಯೆ ಹೇಗೆ?’

ಐದು ಕೋಟಿಗೂ ಅಧಿಕ ಮತದಾರರನ್ನು ಒಳಗೊಂಡಿರುವ ರಾಜ್ಯದಲ್ಲಿ ಇಂತಹ ದೊಡ್ಡ ಮಟ್ಟದ ಪರಿಷ್ಕರಣೆಯನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು. ವಿಧಾನಸಭಾ ಚುನಾವಣೆಗೆ ಇನ್ನೂ ಸುಮಾರು ಎರಡು ವರ್ಷಗಳಿರುವಾಗ SIR ಕೈಗೊಳ್ಳುವ ಅಗತ್ಯವೇನು ಎಂದು ಪ್ರಶ್ನಿಸಿದರು.

ಮತದಾರರಿಗೆ ಸಾಕಷ್ಟು ಜಾಗೃತಿ ಮೂಡಿಸದೆ ಪ್ರಕ್ರಿಯೆ ನಡೆಸಲಾಗಿದೆ. SIR ಆರಂಭಿಸುವ ಮುನ್ನ ಕನಿಷ್ಠ ಆರು ತಿಂಗಳ ಕಾಲಾವಕಾಶ ನೀಡಿ ಜನರಿಗೆ ಮಾಹಿತಿ ನೀಡಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟರು.

ಇದನ್ನೂ ಓದಿ:

‘1.08 ಕೋಟಿ ಮತದಾರರ ಹಕ್ಕಿನ ಪ್ರಶ್ನೆ’

ಚುನಾವಣಾ ಆಯೋಗದ ವಿರುದ್ಧ ನಾಗರಿಕರು ಹಾಗೂ ವಿವಿಧ ಸಂಘಟನೆಗಳು ಸಿದ್ಧಪಡಿಸಿರುವ ದೂರುಗಳ ಸಂಗ್ರಹವನ್ನು ಇದೇ ವೇಳೆ ಪ್ರಕಾಶ್ ರಾಜ್ ಬಿಡುಗಡೆ ಮಾಡಿದರು. ಒಂದು ತಿಂಗಳ ಅವಧಿಯಲ್ಲಿ ಸುಮಾರು 1.08 ಕೋಟಿ ಮತದಾರರ ಹಕ್ಕು ಕಸಿದುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದರು.

ಮತದಾರರ ಪಟ್ಟಿಯಿಂದ ಹೊರಗುಳಿದಿರುವ ಅರ್ಹ ಮತದಾರರನ್ನು ಮತ್ತೆ ಸೇರ್ಪಡೆಗೊಳಿಸುವವರೆಗೆ ಹೋರಾಟ ಮುಂದುವರಿಸುವುದಾಗಿ ಅವರು ಘೋಷಿಸಿದರು. SIR ವಿರುದ್ಧ ಹೋರಾಟ ನಡೆಸುತ್ತಿರುವ ಸಂಘಟನೆಗಳು ಅಗತ್ಯವಿದ್ದರೆ ನ್ಯಾಯಾಲಯದ ಮೊರೆ ಹೋಗಲು ಸಿದ್ಧವಾಗಿವೆ ಎಂದೂ ತಿಳಿಸಿದರು.

‘ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕು’

SIR ಪ್ರಕ್ರಿಯೆಯ ವಿಧಾನವನ್ನು ‘ಅವೈಜ್ಞಾನಿಕ’ ಮತ್ತು ‘ಪ್ರಜಾಪ್ರಭುತ್ವ ವಿರೋಧಿ’ ಎಂದು ಟೀಕಿಸಿದ ಪ್ರಕಾಶ್ ರಾಜ್, ಈ ವಿಚಾರದಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !