ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಬರಪೀಡಿತ ಪ್ರದೇಶಗಳ ರೈತರಿಗೆ ಕೇಂದ್ರ ಸರ್ಕಾರ ಮಹತ್ವದ ಸಿಹಿಸುದ್ದಿ ನೀಡಿದೆ!
ಬೆಳೆ ವಿಮೆ ನೋಂದಣಿ ಹಾಗೂ ಪ್ರೀಮಿಯಂ ಕಡಿತದ ಅವಧಿಯನ್ನು ಆಗಸ್ಟ್ 31ರವರೆಗೆ ವಿಸ್ತರಿಸಿ ಕೇಂದ್ರ ಕೃಷಿ ಸಚಿವಾಲಯ ಆದೇಶ ಹೊರಡಿಸಿದೆ. ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ರೈತರ ಹಿತದೃಷ್ಟಿಯಿಂದ ರಾಜ್ಯದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ನೋಂದಣಿ ಅವಧಿಯನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.
ಅಕಾಲಿಕ ಮಳೆ, ಹವಾಮಾನ ವೈಪರಿತ್ಯದಿಂದ ವಿಳಂಬ
ಅಕಾಲಿಕ ಮಳೆ, ಹವಾಮಾನ ವೈಪರಿತ್ಯ ಹಾಗೂ ಕೆಲವು ತಾಂತ್ರಿಕ ಕಾರಣಗಳಿಂದಾಗಿ ಹಲವು ಪ್ರದೇಶಗಳಲ್ಲಿ ರೈತರಿಗೆ ನಿಗದಿತ ಅವಧಿಯಲ್ಲಿ ಬೆಳೆ ವಿಮೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವಧಿ ವಿಸ್ತರಣೆಗೆ ಮನವಿ ಸಲ್ಲಿಸಿತ್ತು. ಇದನ್ನು ಪರಿಗಣಿಸಿರುವ ಕೇಂದ್ರ ಕೃಷಿ ಸಚಿವಾಲಯ ಬೆಳೆ ವಿಮೆ ನೋಂದಣಿ ಮತ್ತು ಪ್ರೀಮಿಯಂ ಪಾವತಿ ಹಾಗೂ ಕಡಿತದ ಗಡುವನ್ನು ಆ.31ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ:
ನೂರಾರು ರೈತರಿಗೆ ಅನುಕೂಲ
ಬೆಳೆ ವಿಮೆ ನೋಂದಣಿಗೆ ಹೆಚ್ಚುವರಿ ಅವಕಾಶ ದೊರೆತಿರುವುದರಿಂದ ಬರಪೀಡಿತ ಪ್ರದೇಶಗಳ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರಕೃತಿ ವಿಕೋಪ, ಅಕಾಲಿಕ ಮಳೆ ಸೇರಿದಂತೆ ವಿವಿಧ ಕಾರಣಗಳಿಂದ ಬೆಳೆ ಹಾನಿಯಾದ ಸಂದರ್ಭದಲ್ಲಿ ವಿಮೆ ರೈತರಿಗೆ ಆರ್ಥಿಕ ರಕ್ಷಣೆಯಾಗಿ ನಿಲ್ಲಲಿದೆ.
ಅವಧಿ ವಿಸ್ತರಣೆಯಿಂದಾಗಿ ನಿಗದಿತ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗದ ನೂರಾರು ರೈತರು ಬೆಳೆ ವಿಮೆಯ ಸುರಕ್ಷಾ ಕವಚದಿಂದ ವಂಚಿತರಾಗುವುದನ್ನು ತಪ್ಪಿಸಿದಂತಾಗಿದೆ. ರೈತರು ವಿಸ್ತರಿಸಿರುವ ಅವಧಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಬೆಳೆ ವಿಮೆ ನೋಂದಣಿ ಪೂರ್ಣಗೊಳಿಸಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.



