August 27, 2026
Thursday, August 27, 2026
spot_img

ನೇಪಾಳದಲ್ಲಿ ಸಂಕಷ್ಟಕ್ಕೆ ಸಿಲುಕಿದ ತಮಿಳು ಯಾತ್ರಿಕರು: 20 ಜನರು ಸೇಫ್, ಉಳಿದವರ ಪತ್ತೆಗೆ ಶೋಧ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನೇಪಾಳ ಮತ್ತು ಟಿಬೆಟ್ ಗಡಿಯಲ್ಲಿ ಇದ್ದಕ್ಕಿದ್ದಂತೆ ಉಂಟಾದ ಪ್ರವಾಹ ಮತ್ತು ಮಣ್ಣು ಕುಸಿತದಿಂದಾಗಿ, ಕೈಲಾಸ ಮಾನಸಸರೋವರ ಯಾತ್ರೆಗೆ ಹೋಗಿದ್ದ ಭಾರತೀಯ ಯಾತ್ರಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಭಾರತೀಯ ರಾಯಭಾರ ಕಚೇರಿ ಮತ್ತು ತಮಿಳುನಾಡು ಸರ್ಕಾರ ಜೊತೆಯಾಗಿ ತುರ್ತು ರಕ್ಷಣಾ ಕಾರ್ಯ ಆರಂಭಿಸಿವೆ.

ತಮಿಳುನಾಡಿನಿಂದ ಒಟ್ಟು 57 ಜನರು ನೇಪಾಳದ ಮಾರ್ಗವಾಗಿ ಮಾನಸಸರೋವರ ಯಾತ್ರೆಗೆ ಹೋಗಿದ್ದರು. 20 ಯಾತ್ರಿಕರು ಸುರಕ್ಷಿತವಾಗಿದ್ದು, ಅವರನ್ನು ಪ್ರವಾಹ ಪೀಡಿತ ಪ್ರದೇಶದಿಂದ ಸೇನಾ ಶಿಬಿರಕ್ಕೆ ತಲುಪಿಸಲಾಗಿದೆ. ಇನ್ನುಳಿದ 37 ಯಾತ್ರಿಕರಿಗಾಗಿ ನೇಪಾಳದ ಸಶಸ್ತ್ರ ಪಡೆ ಹಾಗೂ ಹೆಲಿಕಾಪ್ಟರ್ ತಂಡಗಳು ಸ್ಥಳದಲ್ಲಿ ತೀವ್ರ ಶೋಧ ನಡೆಸುತ್ತಿವೆ.

ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಿಎಂ ಸಿ.ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವನ್ನು, “ಸಿಲುಕಿಕೊಂಡಿರುವ ತಮಿಳರ ಸ್ಥಿತಿ ಏನು? ರಕ್ಷಣೆಗೆ ಏನೇನು ಕ್ರಮ ಕೈಗೊಳ್ಳಲಾಗಿದೆ?” ಎಂದು ಪ್ರಶ್ನಿಸಿದರು.

ಇದಕ್ಕೆ ತಕ್ಷಣವೇ ಉತ್ತರಿಸಿದ ಸಚಿವ ರಾಜ್‌ಮೋಹನ್ ಅವರು, “ಚೆನ್ನೈನ ಟ್ರಾವೆಲ್ ಏಜೆನ್ಸಿ ಮೂಲಕ ತೆರಳಿದ 49 ಯಾತ್ರಿಕರು ಸೇರಿದಂತೆ ಒಟ್ಟು 57 ಜನರ ಮಾಹಿತಿ ಸಂಗ್ರಹಿಸಲಾಗುತ್ತಿದೆ. ದೆಹಲಿಯ ತಮಿಳುನಾಡು ಭವನದ ಮೂಲಕ ಭಾರತೀಯ ವಿದೇಶಾಂಗ ಸಚಿವಾಲಯ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುವುದು” ಎಂದು ಭರವಸೆ ನೀಡಿದ್ದಾರೆ.

ಭೀಕರ ಪ್ರವಾಹಕ್ಕೆ ಬಲಿಯಾದವರೆಷ್ಟು? ನಾಪತ್ತೆಯಾದವರೆಷ್ಟು?

ನೇಪಾಳ ಮತ್ತು ಚೀನಾ ಗಡಿ ಭಾಗದಲ್ಲಿ ದಿಢೀರನೆ ಭೀಕರ ಪ್ರವಾಹ ಮತ್ತು ಕಲ್ಲು, ಮಣ್ಣು ಕುಸಿತ ಸಂಭವಿಸಿದ್ದು, ದೊಡ್ಡ ಮಟ್ಟದ ಅನಾಹುತವಾಗಿದೆ. ಇಲ್ಲಿಯವರೆಗೆ ಸುಮಾರು 160 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇನ್ನೂ ಸುಮಾರು 800 ರಿಂದ 1,000ಕ್ಕೂ ಹೆಚ್ಚು ಜನರು ಪತ್ತೆಯಾಗಿಲ್ಲ. ಅವರಲ್ಲಿ ಪ್ರವಾಸಿಗರು, ಸ್ಥಳೀಯರು ಮತ್ತು ಭಾರತದಿಂದ ಹೋದ ಸುಮಾರು 100ಕ್ಕೂ ಹೆಚ್ಚು ಯಾತ್ರಿಕರು ಮತ್ತು ಪ್ರವಾಸಿಗರು ಸೇರಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !