“ಅತಿಯಾದರೆ ಅಮೃತವೂ ವಿಷ” ಎಂಬ ನಾಣ್ಣುಡಿ ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೂ ಅನ್ವಯಿಸುತ್ತದೆ. ಮಾನವ ಶರೀರವನ್ನು ಹೊರಗಿನ ವೈರಸ್ ಹಾಗೂ ಸೋಂಕುಗಳಿಂದ ರಕ್ಷಿಸುವ ರೋಗನಿರೋಧಕ ಶಕ್ತಿಯು, ತನ್ನ ಸಮತೋಲನವನ್ನು ಕಳೆದುಕೊಂಡು ಸ್ವಂತ ಜೀವಕೋಶಗಳ ಮೇಲೆಯೇ ದಾಳಿ ಮಾಡಲು ಆರಂಭಿಸಿದಾಗ ‘ಆಟೊಇಮ್ಮ್ಯುನ್’ ಕಾಯಿಲೆಗಳು ಜನ್ಮತಾಳುತ್ತವೆ.
ಜಾಗತಿಕ ಮಟ್ಟದಲ್ಲಿ ಪ್ರತಿ ಹತ್ತು ಜನರಲ್ಲಿ ಒಬ್ಬ ವ್ಯಕ್ತಿಯು ಆಟೊಇಮ್ಮ್ಯುನ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ರುಮಟಾಯ್ಡ್ ಆರ್ಥ್ರೈಟಿಸ್, ಕೆಲವು ಥೈರಾಯ್ಡ್ ಕಾಯಿಲೆಗಳು, ಟೈಪ್ -1 ಮಧುಮೇಹ, ಸಿಸ್ಟೆಮಿಕ್ ಲ್ಯುಪಸ್ ಎರಿಥೆಮಾಟೊಸಿಸ್, ಸೊರಿಯಾಸಿಸ್, ಇನ್ಫ಼್ಲಮೇಟರಿ ಬೊವೆಲ್ ಡಿಸೀಸ್ ಇತ್ಯಾದಿ ಕಾಯಿಲೆಗಳು ಇದರ ಪ್ರಮುಖ ಉದಾಹರಣೆಗಳು.
ಕಳೆದ ಮೂರರಿಂದ ನಾಲ್ಕು ದಶಕಗಳಲ್ಲಿ ಈ ಕಾಯಿಲೆಗಳಿಂದ ಅಂಗವೈಕಲ್ಯತೆಯ ಪ್ರಮಾಣವು ಜಾಸ್ತಿಯಾಗುತ್ತಿದ್ದು ಇಡೀ ವಿಶ್ವಕ್ಕೆ ದೊಡ್ಡ ಸವಾಲನ್ನುಂಟು ಮಾಡಿದೆ. ಇದಕ್ಕೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿನ ಬದಲಾವಣೆ, ಅನುವಂಷಿಕತೆ, ಹಾರ್ಮೋನುಗಳು, ಸೋಂಕುಗಳು, ಧೂಮಪಾನ, ವಾಯುಮಾಲಿನ್ಯ, ಕೈಗಾರಿಕಾ ರಸಾಯನಗಳು, ಆಹಾರ ಸಂರಕ್ಷಕಗಳು, ಕೀಟನಾಶಕಗಳು, ಜಂಕ್ ಫ಼ುಡ್, ಆಹಾರರುಚಿ ಹಾಗು ಸೌಂದರ್ಯವರ್ಧಕಗಳು, ಮಾನಸಿಕ ಒತ್ತಡ, ಗಟ್ ಮೈಕ್ರೋಬಯೋಮ್ ನ ಅಸಮತೋಲತೆ ಇತ್ಯಾದಿ ಮುಖ್ಯ ಕಾರಣಗಳು.
ಆಯುರ್ವೇದದಲ್ಲಿ ಎಲ್ಲಾ ರೋಗಗಳಿಗೆ ಅಗ್ನಿಯೇ ಮೂಲಕಾರಣ ಎಂದು ಪರಿಗಣಿಸಲಾಗಿದೆ. ಮೆಲ್ಕಂಡ ಕಾರಣಗಳಿಂದ ವಿಕ್ರುತಗೊಂಡ ಅಗ್ನಿಯಿಂದ ವಾತ ಪಿತ್ತ ಕಫ ದೊಷಗಳು ಉಲ್ಭಣಗೊಂಡು ಸಪ್ತ ಧಾತು ಪೋ್ಷಣೆಯನ್ನು ಹದಗೆಡಿಸಿ ಅವುಗಳ ಸಾರಭಾಗವಾದ ರೋಗನಿರೊಧಕ ಶಕ್ತಿಯನ್ನು ಉಂಟುಮಡುವ ಓಜಸ್ಸನ್ನು ವಿಕೃತಗೊಳಿಸಿ ವಿವಿಧ ಕಾಯಿಲೆಗಳನ್ನು ಸೃಷ್ಟಿಸುತ್ತದೆ.
ಹೀಗಿರಲು, ‘ಬಲವಾದ ರೋಗನಿರೋಧಕ ಶಕ್ತಿ’ಮಾತ್ರವಲ್ಲ, ದೇಹದ ಸಮತೋಲನ ಮತ್ತು ಆರೋಗ್ಯಕರ ಪ್ರತಿಕ್ರಿಯೆಗೆ ಮಹತ್ವ ನೀಡಲಾಗುತ್ತದೆ. ಇದರ ಜತೆಗೆ ದೋಷಗಳ ಸಮತೋಲನ, ಅಗ್ನಿ, ಧಾತುಗಳ ಪೋಷಣೆ ಮತ್ತು ಓಜಸ್ಸಿನ ಸಂರಕ್ಷಣೆಯನ್ನು ಆರೋಗ್ಯದ ಆಧಾರವೆಂದು ಪರಿಗಣಿಸಲಾಗುತ್ತದೆ. ಅತಿಯಾದ ರೋಗನಿರೋಧಕ ಪ್ರತಿಕ್ರಿಯೆಯನ್ನು ತಡೆಯುವುದು ಕೂಡ ಆರೋಗ್ಯದ ಭಾಗವೇ ಎಂಬ ಆಯುರ್ವೇದದ ‘ಸಮತೋಲನ’ದ ದೃಷ್ಟಿಕೋಣವು ಗಮನಾರ್ಹವಾಗಿದೆ. ಆಯುರ್ವೇದೊಕ್ತ ಸಮತೋಲಿತ ಆಹಾರ, ನಿಯಮಿತ ನಿದ್ರೆ, ಸೂಕ್ತ ವ್ಯಾಯಾಮ, ಯೋಗಾಸನ, ಪ್ರಣಾಯಾಮ, ಧ್ಯಾನಗಳಿಂದ ಒತ್ತಡ ನಿಯಂತ್ರಣ, ದಿನಚರ್ಯ, ಋತುಚರ್ಯಗಳ ಪಾಲನೆ, ವ್ಯಕ್ತಿಯ ಪ್ರಕೃತಿ ಮತ್ತು ಆರೋಗ್ಯಸ್ಥಿತಿಗೆ ಅನುಗುಣವಾದ ಜೀವನಶೈಲಿ ದೇಹದ ಸಮಗ್ರ ಆರೋಗ್ಯವನ್ನು ಪಡೆಯಲು ನೆರವಾಗುತ್ತದೆ.
ಆಯುರ್ವೇದ ಚಿಕಿತ್ಸೆಯಲ್ಲಿ ರೋಗದ ಪ್ರಸ್ತುತ ಸ್ಥಿತಿ ಹಾಗೂ ಈ ಹಿಂದೆ ಕಾಣಿಸಿಕೊಂಡ ಲಕ್ಷಣಗಳು ಮತ್ತು ರೋಗದ ಬೆಳವಣಿಗೆಯ ಹಂತಗಳನ್ನು ಸಮಗ್ರವಾಗಿ ಪರಿಶೀಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತದೆ. ಮೂಲ ಕಾರಣವನ್ನು ಗುರುತಿಸಿ ನಿವಾರಿಸುವ, ರೋಗಲಕ್ಷಣಗಳನ್ನು ಶಮನಗೊಳಿಸುವ, ಪ್ರಕುಪಿತ ದೊಷಗಳನ್ನು ಹೊರಹಾಕುವ ಹಾಗೂ ದೇಹದ ಜೀವಶಕ್ತಿಯನ್ನು ಪುನರುತ್ತೇಜಿಸುವ ಅಂಶಗಳಿಗೆ ಮಹತ್ವ ನೀಡಲಾಗುತ್ತದೆ.
ರೋಗಾನುಸಾರವಾಗಿ ವಮನ, ವಿರೇಚನ, ಬಸ್ತಿ ಮತ್ತು ನಸ್ಯ ಮುಂತಾದ ಪಂಚಕರ್ಮ ವಿಧಾನಗಳನ್ನು ಸೂಕ್ತವಾಗಿ ಬಳಸಿಕೊಂಡು ಆಮ(ಅಜೀರ್ಣಾಹಾರ), ಉಲ್ಭಣಗೊಂಡ ದೋಷಗಳನ್ನು ಹೊರಹಾಕಲಾಗುತ್ತದೆ. ದೇಹದಲ್ಲಿ ಮರುಕಳಿಸಿ ಆಮ ಸಂಗ್ರಹವಾಗುವುದನ್ನು ತಡೆಯಲು ಜೀರ್ಣಕ್ರಿಯೆ ಮತ್ತು ದೊಷಗಳನ್ನು ಹತೋಟಿಗೆ ತರುವ ಸೂಕ್ತ ಆಯುರ್ವೇದೀಯ ಔಷಧಗಳನ್ನು ನೀಡಲಗುತ್ತದೆ. ದೇಹದ ಶಕ್ತಿಯನ್ನು ಉತ್ತೇಜಿಸಲು ರಸಾಯನ ಚಿಕಿತ್ಸೆಯನ್ನು ಪರಿಗಣಿಸಲಾಗುತ್ತದೆ. ಇದು ಹಾನಿಗೊಳಗಾದ ಧಾತುಗಳನ್ನು ಪೋಷಿಸುವುದಲ್ಲದೆ ಮತ್ತು ದೇಹದ ಬಲವನ್ನು ಪುನಃಸ್ಥಾಪಿಸುತ್ತದೆ.
ಆಯುರ್ವೇದವು ರೋಗದ ಚಿಕಿತ್ಸೆಯಲ್ಲಿ ಸಮಗ್ರ ದೃಷ್ಟಿಕೋಣವನ್ನು ಅನುಸರಿಸುದಲ್ಲದೇ ದೇಹದ ಸಹಜ ಕಾರ್ಯಗಳನ್ನು ಅನಗತ್ಯವಾಗಿ ಅಡ್ಡಿಪಡಿಸದೆ, ಪುನರುಜ್ಜೀವನ ಪ್ರಕ್ರಿಯೆಯನ್ನುಂಟುಮಡುತ್ತದೆ. ವೈಜ್ಞಾನಿಕ ಸಂಶೊಧನೆಗಳು ಮೇಲ್ಕಂಡ ಚಿಕಿತ್ಸೆಗಳಿಂದ ಇಮ್ಮ್ಯುನ್ ಮಾರ್ಕರ್ ಗಳು, ಆಕ್ಸಿಡೇಟಿವ್ ಸ್ಟ್ರೆಸ್, ನಿಯಂತ್ರಣಗೊಳ್ಳುವುದಲ್ಲದೇ ಕರಳಿನಲ್ಲಿ ಉತ್ತಮ ಗಟ್ ಮೈಕ್ರೋಬಯೋಮ್ ನಿರ್ಮಿಸುವಲ್ಲಿ ಸಹಕಾರಿಯಾಗಿದೆ ಎಂದು ತೂರಿಸುತ್ತಿವೆ. ಹಾಗಾದರೆ ಬನ್ನಿ ನಾವೆಲ್ಲರು ಇಂತಹ ಪ್ರಯೋಜನಕಾರಿ ಭಾರತೀಯ ಚಿಕಿತ್ಸಾಪದ್ಧತಿಯನ್ನು ತಜ್ಞವೈದ್ಯರ ಸಲಹೆಯೊಂದಿಗೆ ನಮ್ಮ ಜೀವನದಲ್ಲಿ ಅಳವಡಿಸೋಣ ರೋಗಮುಕ್ತರಾಗೊಣ.
ಡಾ.ಸಹನಾ ಶಂಕರಿ
ಸಹಪ್ರಾಧ್ಯಾಪಕಿ ಹಾಗು ಆಯುರ್ವೇದ ಮಕ್ಕಳ ತಜ್ಞೆ
ಕೌಮರಭೃತ್ಯ ವಿಭಾಗ
ಎಸ್.ಡಿ.ಏಂ. ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗು ಸಂಶೋಧನಾ ಕೇಂದ್ರ ಕುತ್ಪಾಡಿ, ಉಡುಪಿ
ಕ್ಷಮಾವತಂ 2026ರ ಮುಖ್ಯ ಭಾಷಣಕಾರರು



