August 28, 2026
Friday, August 28, 2026
spot_img

ಹಾಸನದ ಡಿಸಿ ಲತಾಕುಮಾರಿ ಬಗ್ಗೆ ಏಕವಚನದಲ್ಲಿ ಮಾತನಾಡಿದ ಎಚ್‌.ಡಿ. ರೇವಣ್ಣ, ಕ್ರಮ ಕೈಗೊಳ್ಳಲು ಆಗ್ರಹ

ಹೊಸದಿಗಂತ ವರದಿ ಹಾಸನ :

ಹಾಸನ ಜಿಲ್ಲಾಧಿಕಾರಿ ಲತಾಕುಮಾರಿ ಅವರ ವಿರುದ್ಧ ಹೊಳೆನರಸೀಪುರ ಶಾಸಕ ಎಚ್.ಡಿ. ರೇವಣ್ಣ ಅವರು ಮಾಧ್ಯಮಗಳಲ್ಲಿ ಅವಹೇಳನಕಾರಿ ಭಾಷೆ ಬಳಸಿ ಮಾತನಾಡಿರುವುದನ್ನು ಖಂಡಿಸಿ, ಅವರ ವಿರುದ್ಧ ಕಾನೂನು ಹಾಗೂ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಗಳ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀಧರ ಕಲಿವೀರ ಆಗ್ರಹಿಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಇವಳನ್ನು ಎಲ್ಲಿಂದ ಹಿಡ್ಕೊಂಡು ಬಂದು ಹಾಸನಕ್ಕೆ ಡಿಸಿ ಮಾಡವ್ರೇ?” ಎಂದು ಜಿಲ್ಲಾಧಿಕಾರಿಯವರನ್ನು ಏಕವಚನದಲ್ಲಿ ಉಲ್ಲೇಖಿಸಿರುವುದು ಖಂಡನೀಯ. ಜನಪ್ರತಿನಿಧಿಯಾಗಿರುವ ರೇವಣ್ಣ ಅವರು ಮಹಿಳಾ ಅಧಿಕಾರಿಯೊಬ್ಬರ ಬಗ್ಗೆ ಈ ರೀತಿಯ ಭಾಷೆ ಬಳಸಬಾರದು ಎಂದರು.

ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲೆಯ ಎಲ್ಲ ಜಾತಿ, ಧರ್ಮ ಹಾಗೂ ಭಾಷೆಗಳ ಜನರ ಸಮಸ್ಯೆಗಳಿಗೆ ಕಾನೂನು ವ್ಯಾಪ್ತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಯ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವುದು ಸರಿಯಲ್ಲ. ರೇವಣ್ಣ ಅವರು ಜಿಲ್ಲಾಧಿಕಾರಿಯ ವಿರುದ್ಧ ರಾಜ್ಯಪಾಲರು ಹಾಗೂ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡುವುದಾಗಿ ಹೇಳಿರುವ ಹಿನ್ನೆಲೆಯಲ್ಲಿ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಮಹಿಳಾ ಅಧಿಕಾರಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಕುರಿತು ಸಂಬಂಧಪಟ್ಟ ರಾಷ್ಟ್ರೀಯ ಆಯೋಗಗಳಿಗೂ ದೂರು ಸಲ್ಲಿಸಲಾಗುವುದು ಎಂದು ಮುಖಂಡರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !