Saturday, September 13, 2025

ಅಸ್ಸಾಂನಲ್ಲಿ ಡಾ. ಭೂಪೇನ್ ಹಜಾರಿಕಾ ಕುರಿತ ಪುಸ್ತಕ, 100 ರೂ. ಬೆಳ್ಳಿ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಿಜೋರಾಂ ಹಾಗೂ ಮಣಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಬಳಿಕ ಅಸ್ಸಾಂನ ಗುವಾಹಟಿಯಲ್ಲಿ ಇಂದು ಸಂಜೆ ರೋಡ್ ಶೋ ನಡೆಸಿದ್ದಾರೆ.

ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರ 100ನೇ ಜನ್ಮ ದಿನಾಚರಣೆಯ ಸ್ಮರಣಾರ್ಥ ಆಯೋಜಿಸಲಾದ ಸಮಾರಂಭದಲ್ಲಿ ಭಾಗವಹಿಸಿದ ಮೋದಿ, ಭಾರತ ರತ್ನ ಡಾ. ಭೂಪೇನ್ ಹಜಾರಿಕಾ ಅವರಿಗೆ ಗೌರವ ಸಲ್ಲಿಸಿದರು.

ಡಾ. ಭೂಪೇನ್ ಹಜಾರಿಕಾ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ 100 ರೂ. ಮೌಲ್ಯದ ನಾಣ್ಯವನ್ನು ಬಿಡುಗಡೆ ಮಾಡಿದರು. ಹಾಗೇ, ಪ್ರಸಿದ್ಧ ಲೇಖಕಿ ಅನುರಾಧಾ ಶರ್ಮಾ ಬೋರ್ಪುಜಾರಿ ಬರೆದ ಡಾ. ಭೂಪೇನ್ ಹಜಾರಿಕಾ ಅವರ ಜೀವನ ಚರಿತ್ರೆಯ ಪುಸ್ತಕವನ್ನು ಕೂಡ ಪ್ರಧಾನಿ ಮೋದಿ ಬಿಡುಗಡೆ ಮಾಡಿದರು.

ಡಾ. ಭೂಪೇನ್ ಹಜಾರಿಕಾ ಅವರು ಅಸ್ಸಾಂನಲ್ಲಿ ನಾಣ್ಯವನ್ನು ಬಿಡುಗಡೆ ಮಾಡುವ ಮೂಲಕ ಗೌರವಿಸಲ್ಪಟ್ಟ ಮೊದಲ ವ್ಯಕ್ತಿಯಾಗಿದ್ದಾರೆ. ಹಣಕಾಸು ಸಚಿವಾಲಯದ ನಿರ್ದೇಶನದ ಮೇರೆಗೆ ಮುಂಬೈನ ಭಾರತ ಸರ್ಕಾರಿ ಟಂಕಸಾಲೆಯಲ್ಲಿ ಮುದ್ರಿಸಲಾದ 100 ರೂ. ನಾಣ್ಯವು ಒಟ್ಟು 40 ಗ್ರಾಂ ತೂಕವಿದ್ದು, ಶುದ್ಧ ಬೆಳ್ಳಿಯಿಂದ ಮಾಡಲ್ಪಟ್ಟಿದೆ.

ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಕೆಲವೇ ದಿನಗಳ ಹಿಂದೆ, ಸೆಪ್ಟೆಂಬರ್ 8ರಂದು ಭೂಪೇನ್ ಹಜಾರಿಕಾ ಅವರ ಜನ್ಮದಿನದ ಸಂದರ್ಭದಲ್ಲಿ ಭೂಪೇನ್ ದಾ ಅವರಿಗೆ ಮೀಸಲಾಗಿರುವ ಲೇಖನದಲ್ಲಿ ನಾನು ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ. ಅವರ ಜನ್ಮ ಶತಮಾನೋತ್ಸವ ವರ್ಷದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ನಾವೆಲ್ಲರೂ ಭೂಪೇನ್ ದಾ ಅವರನ್ನು ಪ್ರೀತಿಯಿಂದ ‘ಸುಧಾ ಕೊಂಥೋ’ ಎಂದು ಕರೆಯುತ್ತಿದ್ದೆವು. ಭೂಪೇನ್ ಹಜಾರಿಕಾ ಅವರ ಸಂಗೀತವು ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಕಲ್ಪನೆಯನ್ನು ಒಳಗೊಂಡಿದೆ. ಅವರು ಭಾರತದ ಸಾಂಸ್ಕೃತಿಕ ಸಂಪ್ರದಾಯಗಳಲ್ಲಿ ಬೇರೂರಿದ್ದರು” ಎಂದು ಮೋದಿ ಹೇಳಿದ್ದಾರೆ.

ದಶಕಗಳ ಹಿಂದೆ ಈಶಾನ್ಯವು ನಿರ್ಲಕ್ಷ್ಯಕ್ಕೆ ಬಲಿಯಾಗಿ, ಹಿಂಸಾಚಾರ ಮತ್ತು ಪ್ರತ್ಯೇಕತಾವಾದದ ಬೆಂಕಿಯಲ್ಲಿ ಸುಟ್ಟುಹೋದಾಗ ಭೂಪೇನ್ ದಾ ಆ ಕಷ್ಟದ ಸಮಯದಲ್ಲೂ ಭಾರತದ ಏಕತೆಗೆ ಧ್ವನಿ ನೀಡುತ್ತಲೇ ಇದ್ದರು. ಅವರು ಸಮೃದ್ಧ ಈಶಾನ್ಯದ ಕನಸು ಕಂಡಿದ್ದರು. ಅವರು ಈಶಾನ್ಯಕ್ಕಾಗಿ ಹಾಡುಗಳನ್ನು ಹಾಡಿದರು. ಅವರು ಅಸ್ಸಾಂಗಾಗಿ ಹಾಡುಗಳನ್ನು ಹಾಡಿದರು. ಇಂದು, ಈಶಾನ್ಯಕ್ಕಾಗಿ ಅವರ ಕನಸುಗಳನ್ನು ನನಸಾಗಿಸಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ