ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾಕಪ್ ನಲ್ಲಿ ಇಂದು ಭಾರತ- ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಲಿದ್ದು, ಎರಡು ತಂಡಗಳು ಎದುರಿಸಲು ಸಿದ್ಧವಾಗಿದೆ.
ಈ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
ಭಾರತ ತಂಡವು ಟೂರ್ನಿಯ ತನ್ನ ಮೊದಲ ಪಂದ್ಯದಲ್ಲಿ ಯುಎಇಯನ್ನು ಸೋಲಿಸಿತು. ಮತ್ತೊಂದೆಡೆ, ಪಾಕಿಸ್ತಾನವು ಓಮನ್ ಅನ್ನು ಸೋಲಿಸುವ ಮೂಲಕ ಉತ್ತಮ ಆರಂಭವನ್ನು ಮಾಡಿದೆ. ಉಭಯ ತಂಡಗಳು ಮೊದಲ ಗೆಲುವು ಕಂಡಿರುವ ಕಾರಣ ಇಂದಿನ ಪಂದ್ಯ ರೋಚಕತೆ ಸೃಷ್ಟಿಸಿದೆ.
ಏಷ್ಯಾಕಪ್ ಇತಿಹಾಸದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಇದುವರೆಗೆ ಒಟ್ಟು 19 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ 10 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ 6 ಪಂದ್ಯಗಳನ್ನು ಗೆದ್ದಿದೆ. ಆದರೆ 3 ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಟಿ20 ಏಷ್ಯಾಕಪ್‌ನಲ್ಲಿ ಎರಡೂ ತಂಡಗಳು 3 ಬಾರಿ ಮುಖಾಮುಖಿಯಾಗಿವೆ, ಇದರಲ್ಲಿ ಭಾರತ 2 ಪಂದ್ಯಗಳನ್ನು ಗೆದ್ದಿದ್ದರೆ, ಪಾಕಿಸ್ತಾನ ಕೇವಲ 1 ಪಂದ್ಯವನ್ನು ಗೆದ್ದಿದೆ.
ಇದರ ಮಧ್ಯೆ, ಕೆಲ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯವನ್ನು ವೀಕ್ಷಿಸದಿರಲು ನಿರ್ಧರಿಸಿದ್ದಾರೆ. ಆಪರೇಷನ್ ಸಿಂದೂರ್ ನಂತರಎರಡೂ ತಂಡಗಳು ಮೊದಲ ಬಾರಿಗೆ ಮುಖಾಮುಖಿಯಾಗಲಿವೆ. ಈ ಪಂದ್ಯದ ಬಗ್ಗೆ ಭಾರತದಲ್ಲಿ ಸಾಕಷ್ಟು ಪ್ರತಿಭಟನೆ ವ್ಯಕ್ತವಾಗುತ್ತಿದೆ. ಈ ಪಂದ್ಯವನ್ನು ರದ್ದುಗೊಳಿಸುವಂತೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ. ದೇಶಕ್ಕಿಂತ ಕ್ರಿಕೆಟ್ ಮುಖ್ಯವಲ್ಲ, ಪಾಕಿಸ್ತಾನಕ್ಕೆ ಬುದ್ದಿ ಕಲಿಸಬೇಕೆಂದರೆ, ಅವರ ವಿರುದ್ಧ ಯಾವುದೇ ಪಂದ್ಯವನ್ನು ಆಡಬಾರದು ಎಂದು ಭಾರತೀಯರು ಒತ್ತಾಯಿಸುತ್ತಿದ್ದಾರೆ.