ಹೊಸದಿಗಂತ ವರದಿ ಹಾಸನ :
ಮಲೆನಾಡಿನಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡಿನಲ್ಲಿದ್ದ ಅಂದಾಜು 35 ವರ್ಷದ ಹೆಣ್ಣಾನೆಯೊಂದು ವಿದ್ಯುತ್ ಶಾಕ್ಗೆ ಬಲಿಯಾಗಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಕೋಗಿಲಮನೆ ಗ್ರಾಮದ ಬಳಿ ನಡೆದಿದೆ.
ಕೋಗಿಲಮನೆ ಗ್ರಾಮದ ಶಶಿ ಎಂಬುವವರಿಗೆ ಸೇರಿದ ಜಮೀನಿನಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು ಎನ್ನಲಾಗಿದೆ. ಆಹಾರ ಅರಸಿ ಬಂದಿದ್ದ ಕಾಡಾನೆಗಳ ಹಿಂಡು ಜಮೀನಿನ ಮೂಲಕ ಸಾಗುತ್ತಿದ್ದ ವೇಳೆ, ಇತರ ಆನೆಗಳು ವಿದ್ಯುತ್ ತಂತಿಯನ್ನು ತಪ್ಪಿಸಿಕೊಂಡು ಮುಂದೆ ಸಾಗಿವೆ. ಈ ವೇಳೆ ಹಿಂಡಿನಲ್ಲಿದ್ದ ಬೃಹತ್ ಗಾತ್ರದ ಹೆಣ್ಣಾನೆಯ ಸೊಂಡಿಲು ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗೆ ತಗುಲಿದ್ದು, ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಆನೆಯ ಸಾವಿಗೆ ನಿಖರ ಕಾರಣವೇನು ಹಾಗೂ ವಿದ್ಯುತ್ ತಂತಿ ಯಾವ ಕಾರಣಕ್ಕೆ ತುಂಡಾಗಿ ಬಿದ್ದಿತ್ತು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ವಿದ್ಯುತ್ ಅವಘಡದಿಂದ ಕಾಡಾನೆ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.



