ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಬೇನಿಯಾ ದೇಶದಲ್ಲಿ ರಾಜಕೀಯಕ್ಕೆ ಎಐ ತಂತ್ರಜ್ಞಾನ ಎಂಟ್ರಿಕೊಟ್ಟಿದೆ. ಅದರಲ್ಲೂ ಸಚಿವ ಸ್ಥಾನವೂ ಲಭಿಸಿದೆ.
ಹೌದು, ಭ್ರಷ್ಟಾಚಾರ ನಿರ್ಮೂಲನೆ, ಪಾರದರ್ಶಕತೆ ಮತ್ತು ಹೊಸತನವನ್ನು ಉತ್ತೇಜಿಸುವ ಉದ್ದೇಶದಿಂದ ಅಲ್ಬೇನಿಯಾ ಸರ್ಕಾರವು ಒಬ್ಬಳು ಕೃತಕ ಬುದ್ಧಿಮತ್ತೆ ಸಚಿವೆಯನ್ನು ತನ್ನ ನೂತನ ಸಂಪುಟಕ್ಕೆ ಸೇರಿಸಿಕೊಂಡಿದೆ. ಈ ಸಚಿವರಿಗೆ ‘ಡಿಯೆಲ್ಲಾ’ ಎಂದು ಹೆಸರಿಡಲಾಗಿದೆ.
ಅಲ್ಬೇನಿಯಾ ಭಾಷೆಯಲ್ಲಿ ಈ ಪದಕ್ಕೆ ‘ಸೂರ್ಯ’ ಎಂದು ಅರ್ಥ. ಈ ಹೊಸ ಎಐ ಮಂತ್ರಿ ಯಾವುದೇ ಭೌತಿಕ ಅಸ್ತಿತ್ವವಿಲ್ಲದ ಒಂದು ವರ್ಚುವಲ್ ಘಟಕವಾಗಿದೆ.
ಪ್ರಧಾನಿ ಎಡಿ ರಾಮ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ‘ಡಿಯೆಲ್ಲಾ ಒಬ್ಬಳು ಕ್ಯಾಬಿನೆಟ್ ಸದಸ್ಯೆ, ಆದರೆ ಅವರು ಭೌತಿಕವಾಗಿ ಉಪಸ್ಥಿತರಿಲ್ಲ, ಬದಲಾಗಿ ವರ್ಚುವಲ್ ರೂಪದಲ್ಲಿ ಸೃಷ್ಟಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಧಾನಿ ರಾಮ ಅವರ ಪ್ರಕಾರ, ಈ ಎಐ ಮಂತ್ರಿಯ ನೇಮಕದಿಂದ ಸರ್ಕಾರವನ್ನು ಇನ್ನಷ್ಟು ವೇಗವಾಗಿ ಮತ್ತು ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸ ಮಾಡಲು ಸಹಾಯ ಮಾಡಲಿದೆ. ವಿಶೇಷವಾಗಿ ಸಾರ್ವಜನಿಕ ಟೆಂಡರ್‌ಗಳು 100% ಭ್ರಷ್ಟಾಚಾರ ಮುಕ್ತವಾಗಿರುತ್ತವೆ ಎಂದು ಅವರು ಭರವಸೆ ನೀಡಿದ್ದಾರೆ.
ಅಲ್ಬೇನಿಯಾದ ರಾಷ್ಟ್ರೀಯ ಮಾಹಿತಿ ಸೊಸೈಟಿ ಏಜೆನ್ಸಿಯ ವೆಬ್‌ಸೈಟ್ ಪ್ರಕಾರ, ಡಿಯೆಲ್ಲಾ ಎಐಯ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಮಾದರಿಗಳನ್ನು ಬಳಸಿಕೊಂಡು, ತನ್ನ ಜವಾಬ್ದಾರಿಗಳನ್ನು ನಿಖರವಾಗಿ ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಮಾನವ ಹಸ್ತಕ್ಷೇಪ, ಲಂಚ ಅಥವಾ ಯಾವುದೇ ರೀತಿಯ ಆಮಿಷಗಳನ್ನು ನಿವಾರಿಸುವ ಮೂಲಕ, ವ್ಯವಹಾರಗಳು ಸಂಪೂರ್ಣ ಅರ್ಹತೆಯ ಆಧಾರದ ಮೇಲೆ ನಡೆಯುವುದನ್ನು ಖಚಿತಪಡಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಜನವರಿಯಲ್ಲಿ ಡಿಯೆಲ್ಲಾವನ್ನು ಎಐ-ಚಾಲಿತ ಡಿಜಿಟಲ್ ಸಹಾಯಕನಾಗಿ ಪರಿಚಯಿಸಲಾಯಿತು. ಇದನ್ನು ಸಾಂಪ್ರದಾಯಿಕ ಅಲ್ಬೇನಿಯನ್ ಉಡುಪನ್ನು ಧರಿಸಿದ ಮಹಿಳೆಯನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಇದು ‘ಇ-ಅಲ್ಬೇನಿಯಾ’ ಎಂಬ ಸಾರ್ವಜನಿಕ ಸೇವಾ ವೇದಿಕೆಯಲ್ಲಿ ಈಗಾಗಲೇ ವರ್ಚುವಲ್ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 1 ದಶಲಕ್ಷ ಡಿಜಿಟಲ್ ವಿಚಾರಣೆಗಳು ಮತ್ತು ದಾಖಲೆಗಳಿಗೆ ಸಂಬಂಧಿಸಿದಂತೆ ಬಳಕೆದಾರರಿಗೆ ಮಾರ್ಗದರ್ಶನ ನೀಡಿದೆ.
ಡಿಯೆಲ್ಲಾ ಈಗಾಗಲೇ ವರ್ಚುವಲ್ ಸಹಾಯಕಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಡಿಯೆಲ್ಲಾ ಈವರೆಗೆ 36,600 ಕ್ಕೂ ಹೆಚ್ಚು ಡಿಜಿಟಲ್ ದಾಖಲೆಗಳನ್ನು ನೀಡಲು ಮತ್ತು ಇ-ಅಲ್ಬೇನಿಯಾ ವೇದಿಕೆಯ ಮೂಲಕ ಸುಮಾರು 1,000 ಸೇವೆಗಳನ್ನು ಒದಗಿಸಲು ನೆರವಾಗಿದೆ.