August 31, 2026
Monday, August 31, 2026
spot_img

ಶ್ರೀಲಂಕಾ ಟೆಸ್ಟ್ ಮುಗಿದರೂ ರೆಸ್ಟ್ ಇಲ್ಲ: ಬೆಂಗಳೂರಿಗೆ ದೌಡಾಯಿಸಿದ ಸ್ಟಾರ್ ಆಟಗಾರರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾ ಟೆಸ್ಟ್ ಪಂದ್ಯ ಮುಗಿದು ಸ್ವಲ್ಪ ವಿಶ್ರಾಂತಿ ಮಾಡುವ ಯೋಚನೆಯಲ್ಲಿದ್ದ ಟೀಮ್ ಇಂಡಿಯಾಗೆ ಯಾಕೋ ಸಣ್ಣ ಮಟ್ಟಿನ ಶಾಕ್ ಎದುರಾಗಿದೆ.

ಹೌದು! ಟೆಸ್ಟ್ ಸರಣಿ ಮುಗಿಯುತ್ತಿದಂತೆ ಕೇಂದ್ರೀಯ ಒಪ್ಪಂದದ ಕೆಲ ಆಟಗಾರರು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಹಾಜರಾಗಿ ಫಿಟ್‌ನೆಸ್ ಪರೀಕ್ಷೆ ಎದುರಿಸಿದ್ದಾರೆ. ಕಾರಣ ಏನು ಅಂತ ಕೇಳೋದಾದ್ರೆ ಟೀಮ್ ಇಂಡಿಯಾದ ಮುಂದಿನ 8 ತಿಂಗಳು ಸಿಕ್ಕಾಪಟ್ಟೆ ಬ್ಯುಸಿ ಆಗಿರೋದ್ರಿಂದ ಬಿಸಿಸಿಐ ಸದ್ಯ ಆಟಗಾರರ ಫಿಟ್ನೆಸ್ ಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ.

ಬೆಂಗಳೂರಿಗೆ ಬಂದಿರೋದು ಯಾರೆಲ್ಲ

ರವೀಂದ್ರ ಜಡೇಜಾ, ರಿಷಭ್ ಪಂತ್, ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್ ಸೇರಿದಂತೆ ಹಲವು ಆಟಗಾರರು ಬೆಂಗಳೂರಿನಲ್ಲಿ ಫಿಟ್ನೆಸ್ ಪರೀಕ್ಷೆ ಎದುರಿಸಿದ್ದಾರೆ.

ಪಾಂಡ್ಯ, ಬುಮ್ರಾಗೆ ಇಲ್ಲ ಪರೀಕ್ಷೆ

ಸದ್ಯ ಹಾರ್ದಿಕ್ ಪಾಂಡ್ಯ, ಜಸ್‌ಪ್ರೀತ್ ಬುಮ್ರಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಗಾಯದ ಸಮಸ್ಯೆಯಿಂದ ಫಿಟ್ನೆಸ್ ಪರೀಕ್ಷೆಯಿಂದ ಹೊರಗುಳಿದಿದ್ದು, ಗುಣಮುಖರಾಗಿ ಮತ್ತೆ ಪರೀಕ್ಷೆಗೆ ಹಾಜರಾಗಲಿದ್ದಾರೆ. ಇನ್ನು ಶ್ರೀಲಂಕಾ ಟೆಸ್ಟ್ ನಲ್ಲಿ ಭರ್ಜರಿ ಬೌಲಿಂಗ್ ಮಾಡಿದ್ದ ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣಗೆ ಈ ಪರೀಕ್ಷೆಯಿಂದ ವಿನಾಯಿತಿ ಸಿಕ್ಕಿದೆ.

ಹೇಗಿರುತ್ತೆ ಫಿಟ್ನೆಸ್ ಟೆಸ್ಟ್

ಹಲವಾರು ಹಂತಗಳಲ್ಲಿ ಆಟಗಾರರಿಗೆ ಫಿಟ್ನೆಸ್ ಪರೀಕ್ಷೆ ನಡೆಯುತ್ತೆ. ಬ್ರಾಂಕೊ ಟೆಸ್ಟ್‌ನಲ್ಲಿ 20, 40 ಹಾಗೂ 60 ಮೀಟರ್ ದೂರವನ್ನು ಒಳಗೊಂಡ ಐದು ಸೆಟ್‌ಗಳಲ್ಲಿ ಓಡಬೇಕು. ಇದು ಒಟ್ಟು 1,200 ಮೀಟರ್ ಓಟವನ್ನು 5 ನಿಮಿಷ 30 ಸೆಕೆಂಡುಗಳಲ್ಲಿ ಪೂರ್ಣಗೊಳಿಸಬೇಕು. ಇದರ ಜೊತೆಗೆ 2 ಕಿಲೋಮೀಟರ್ ಓಟವನ್ನು 10 ನಿಮಿಷದಲ್ಲಿ ಮುಗಿಸಬೇಕು. ಇನ್ನು ವಿಕೆಟ್ ಗಳ ನಡುವೆ ನಡೆಯುವ ಯೋ-ಯೋ ಟೆಸ್ಟ್ ಕೂಡ ಫಿಟ್ನೆಸ್ ಪರೀಕ್ಷೆಯ ಒಂದು ಭಾಗವಾಗಿರುತ್ತದೆ.

ಮುಂದಿನ ತಿಂಗಳು ಭಾರತ ತಂಡ ನವದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ ಮೂರು ಟಿ20 ಪಂದ್ಯಗಳನ್ನು ಆಡಲಿದೆ. ಭಾರತ ಎರಡು ತಂಡಗಳೊಂದಿಗೆ ಸರಣಿ ಶುರು ಮಾಡಲಿದ್ದು, ಒಂದು ತಂಡ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ತೆರಳಿದರೆ, ಮತ್ತೊಂದು ತಂಡ ಭಾರತದಲ್ಲೇ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !
Skip to toolbar