ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಬ್ಬದ ಸೀಸನ್ ಶುರುವಾಗಿದ್ದು, ರಾಜ್ಯದಲ್ಲಿ ಎಫ್‌ಡಿಎ ಅಧಿಕಾರಿಗಳುಕೂಡ ಹೈ ಅಲರ್ಟ್ ಆಗಿದ್ದು, ಸಿಹಿ ತಿಂಡಿಗಳ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿದ್ದು ವಿವಿಧ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಒಟ್ಟು 16 ಘಟಕಗಳನ್ನು ಪರಿಶೀಲಿಸಿದ್ದು,ಸಿಹಿತಿಂಡಿ, ಅಡುಗೆ ಎಣ್ಣೆ, ಮೊಸರು, ಬೇಳೆ, ಖೋವಾ, ಜಿಲೇಬಿ, ಟೀ ಪೌಡರ್ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಾಗಿದೆ.
ತಪಾಸಣೆ ವೇಳೆ ಅಧಿಕಾರಿಗಳಿಗೆ ಶಾಕ್
ತಪಾಸಣೆ ನಡೆಸುವಾಗ ಅವಧಿ ಮೀರಿದ 5 ಲೀಟರ್ ನಂದಿನಿ ಮೊಸರು, ಲೇಬಲ್‌ನಲ್ಲಿ ತಪ್ಪು ಮಾಹಿತಿ ಹೊಂದಿದ್ದ ಚಾಕೊಲೇಟ್ ಅಲಂಕಾರಿಕ ವಸ್ತುಗಳ 13 ದೊಡ್ಡ ಹಾಗೂ 6 ಸಣ್ಣ ಪ್ಯಾಕೆಟ್‌ಗಳು, 10 ಕೆ.ಜಿ. ಚಾಕೊಲೇಟ್ ಫ್ಲೇವರ್ ಮತ್ತು 5 ಕೆ.ಜಿ., 367 ಕೆ.ಜಿ. ರೆಡಿ-ಟು-ಈಟ್ ಖಾರ ತಿಂಡಿಗಳು, 4 ಕೆ.ಜಿ. ಕೋಕೋ ಪೌಡರ್, 4.5 ಕೆ.ಜಿ. ಒಡೆದ ಕೋಕೋ ಬೀಜಗಳು, 6 ಕೆ.ಜಿ. ಖೋವಾ ಹಾಗೂ 196 ಕೆ.ಜಿ. ಸೋಂಪು ಪುಡಿ, ರಸಗುಲ್ಲಾ ಪತ್ತೆಯಾಗಿದ್ದು ಇದನ್ನು ಕಂಡು ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ಎಲ್ಲಾ ಆಹಾರ ಸಾಮಗ್ರಿಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ ಬಾಳೆಹಣ್ಣಿನ ಚಿಪ್ಸ್ ಹಾಗೂ ಚಕ್ಕುಲಿ ಮಸಾಲೆಯಂತಹ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳಲ್ಲಿ ತಯಾರಕರ ಹೆಸರು, ವಿಳಾಸ ಮತ್ತು FSSAI ಪರವಾನಗಿ ಸಂಖ್ಯೆಯಂತಹ ಕಡ್ಡಾಯ ಮಾಹಿತಿಗಳು ಇಲ್ಲದಿರುವುದು ಪತ್ತೆಯಾಗಿದೆ.
ಒಟ್ಟಾರೆ ಸುಮಾರು 5.99 ಲಕ್ಷ ರೂ ಮೌಲ್ಯದ ಆಹಾರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



