September 1, 2026
Tuesday, September 1, 2026
spot_img

ಗದಗ ಜಿಲ್ಲೆಯಲ್ಲಿ ಸಿಎಂ ಬರ ವೀಕ್ಷಣೆ: ರೈತರ ಜಮೀನಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲಿಸಿದ ಡಿಕೆಶಿ

ಹೊಸದಿಗಂತ ವರದಿ ಗದಗ:

ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿ ಬರ ಪರಿಸ್ಥಿತಿ ಬಗ್ಗೆ ಅವಲೋಕನ ಮಾಡಿದರು. ಮುಂಡರಗಿ ತಾಲೂಕಿನ ಕದಾಂಪೂರ ಬಳಿ ರೈತರ ಜಮೀನಿನಲ್ಲಿ ಬೆಳೆದ ಸೂರ್ಯಕಾಂತಿ, ಮೆಕ್ಕೆಜೋಳ, ಹತ್ತಿ ಬೆಳೆ ಪರಿಶೀಲನೆ ಮಾಡಿದರು.

ಅಧಿಕಾರಿಗಳ ವಿರುದ್ಧ ಸಿಎಂ ಗರಂ:

ಸಿಎಂ ಡಿ.ಕೆ. ಶಿವಕುಮಾರ್ ಬೆಳೆ ವೀಕ್ಷಣೆ ಮಾಡುವ ವೇಳೆ ಜನರು ನೂಕು ನುಗ್ಗಲು ಉಂಟಾಯಿತು. ಆಗ ಐಜಿಪಿ, ಎಸ್ಪಿ ಹಾಗೂ ಡಿಸಿಗೆ ಕರೆದು ವಾರ್ನ್ ಮಾಡಿದರು. ನಾಲ್ಕು ಜನ ಪೊಲೀಸ್ ಅಧಿಕಾರಿ ಸಸ್ಪೆಂಡ್ ಮಾಡಿದಾಗ ನಿಮಗೆ ಬುದ್ದಿ ಬರುತ್ತೆ. ನಾನು ಬೆಳೆ ಹಾನಿ ನೋಡಲು ಬಂದಿದ್ದೇನೆ. ಜನರನ್ನು ಕಂಟ್ರೋಲ್ ಮಾಡಲು ನಿಮ್ಮಿಂದ ಆಗಲ್ವಾ ಹೇಳಿ ಎಂದು ಅಧಿಕಾರಿಗಳ ವಿರುದ್ಧ ಸಿಎಂ ಗರಂ ಆದರು. ನಂತರ ಅಲ್ಲಿದ್ದ ಮಾಧ್ಯಮದವರು, ರೈತರು, ಸಾರ್ವಜನಿಕರನ್ನು ದೂರ ತಳ್ಳಲು ಪೊಲೀಸರು ಶುರುಮಾಡಿದರು. ಯಾರನ್ನು ಮುಂದಕ್ಕೆ ಬಿಡದಂತೆ ಸಿಎಂ ಆದೇಶ ಇದೆ ಅಂತಾ ಪೊಲೀಸರು ದರ್ಪ ತೋರಿದರು. ಹಗ್ಗ ಬಳಸಿ ಮಾಧ್ಯಮದವರನ್ನು ನಿಯಂತ್ರಿಸಲು ಪೊಲೀಸರು‌ ಮುಂದಾದರು.

ರೈತರೊಂದಿಗೆ ಸಮಾಲೋಚನೆ:

ಮುಂಡರಗಿ ತಾಲೂಕಿನ ಕದಾಂಪೂರ ಗ್ರಾಮದ ರೈತ ಶಂಕರಪ್ಪ ಗಾವರವಾಡ, ಸುನಿತಾ ಪೂಜಾರ್, ಕಲ್ಲಪ್ಪ ಕಾಡಪ್ಪಗೋಳ ಎಂಬುರ ಜಮೀನಿನ ಬೆಳೆ ವೀಕ್ಷಣೆ ಮಾಡಿದರು. ನಂತರ  ರೈತರೊಂದಿಗೆ ಸಿಎಂ ಸಮಾಲೋಚನೆ ಮಾಡಿದರು. ರೈತರ ಜತೆಗೆ ನೆಲದ ಮೇಲೆ ಕುಳಿತು ರೈತರ ಪರಿಸ್ಥಿತಿ ಆಲಿಸಿದರು. ವಿವಿಧ ಬೆಳೆಗೆ ಒಂದು ಎಕರೆಗೆ ಎಷ್ಟು ಹಣ ಖರ್ಚಾಗುತ್ತೆ ಅಂತ ರೈತರಿಂದ ಮಾಹಿತಿ ಪಡೆದರು. ಕೃಷಿ ಅಧಿಕಾರಿ ಚೇತನಾ ಪಾಟೀಲರಿಂದ ಮಾಹಿತಿ ಪಡೆದುಕೊಂಡರು.

ಎಷ್ಟು ಬಿತ್ತನೆ ಆಗಬೇಕು, ಎಷ್ಟು ಬಿತ್ತನೆ ಆಗಿದೆ. ಮಳೆ ಪ್ರಮಾಣ ಎಷ್ಟು ಅಂತೆಲ್ಲ ಮಾಹಿತಿ ಪಡೆದುಕೊಂಡರು. ಇದೇ ವೇಳೆ ಮೆಕ್ಕೆಜೋಳ ಬೆಳೆ ಸವಿದರು. ನಂತರ ರೈತರ ಮನವಿ ಸ್ವೀಕರಿಸಿದರು.

ಜಿಲ್ಲೆಯನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡಿ:

ಮುಂಗಾರು ಹಂಗಾಮಿನಲ್ಲಿ ಮಳೆ ಕೈ ಕೊಟ್ಟಿದೆ. ಹೀಗಾಗಿ ಜಿಲ್ಲೆ 7 ತಾಲೂಕಗಳನ್ನು ಸಂಪೂರ್ಣ ಬರಗಾಲ ಘೋಷಣೆ ಮಾಡಬೇಕು. ಪ್ರತಿ ಎಕರೆ 50 ಸಾವಿರ ಬೆಳೆ ಪರಿಹಾರ ನೀಡಬೇಕು. ಗೋ ಶಾಲೆ,‌‌ ಮೇವು ಬ್ಯಾಂಕ್ ಆರಂಭಿಸಬೇಕು. ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್ ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕು. ಕಾರ್ಮಿಕರಿಗೆ ಉದ್ಯೋಗ ಕಲ್ಪಿಸುವಂತೆ ಸಿಎಂ ಗೆ ಮನವಿ ಸಲ್ಲಿಸಿದರು. ನಂತರ ಈ ವರದಿಗಳನ್ನು ಕೇಂದ್ರಕ್ಕೆ ಸಲ್ಲಿಸುವುದಾಗಿ ಸಿಎಂ ಹೇಳಿದರು.

ಕೇಂದ್ರ ತಂಡದಿಂದ ಅಧ್ಯಯನ:

ಮೊದಲು ಸಚಿವರು ಬರ ವೀಕ್ಷಣೆ ಮಾಡಿದ್ದರು. ಈಗ ನಾನು ಬಂದಿದ್ದೆನೆ. ಈ ವರದಿ ಕೇಂದ್ರ ಕಳಿಸುತ್ತೆನೆ. ಕೇಂದ್ರದಿಂದ ತಂಡ ಬಂದು ಅಧ್ಯಯನ ಮಾಡುತ್ತೆ. ನಂತರ ಪರಿಹಾರ ಘೋಷಣೆ ಆಗುತ್ತೆ ಎಂದ ಸಿಎಂ ಭರವಸೆ ನೀಡಿದರು. ನಂತರ ಗದಗ ತಾಲೂಕಿನ ಕುರ್ತಕೋಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲೂ ಬೆಳೆ ವೀಕ್ಷಣೆ ಮಾಡಿದರು.

ಕುರ್ತಕೋಟಿ ವಿಶ್ವನಾಥ್ ಪಾಟೀಲ ಬೆಳೆದ ಶೇಂಗಾ ಬೆಳೆ ವೀಕ್ಷಣೆ ಮಾಡಿ, ಶೇಂಗಾ ಬೆಳೆಯನ್ನು ಸವಿದರು. ನಂತರ ತಾಲೂಕಿನ ಕುರ್ತಕೋಟಿ ಬಳಿ ರೈತರ ಮನವಿ ಸ್ವೀಕರಿಸಿದರು.

ಇದನ್ನೂ ಓದಿ:

ಸೂರ್ಯಕಾಂತಿ ಬೆಳೆಗೆ ಹಾನಿ:

ಸಿಎಂ ಬರ ವೀಕ್ಷಣೆ ವೇಳೆ ಸಿಎಂ ಜತೆ ಅಧಿಕಾರಿಗಳು, ಪೊಲೀಸರು, ಸಾರ್ವಜನಿಕರು ಜಮೀನಿಗೆ ಎಂಟ್ರಿ ಕೊಟ್ಟಿದ್ದರು. ಜನರ ತುಳಿತದಿಂದ ಸೂರ್ಯಕಾಂತಿ ಬೆಳೆ ಹಾಳಾಯಿತು. ಅಲ್ಪ ಸ್ವಲ್ಪ ಬೆಳೆದ ಬೆಳೆ ನಾಲ್ಕು ಕ್ವಿಂಟಲ್ ಸೂರ್ಯಕಾಂತಿ ಅಗುತಿತ್ತು. ಈಗ ಅದು ಕೈ ತಪ್ಪಿ ಹೋಯಿತು ಎಂದು ಜಮೀನಿನ ಮಾಲಿಕ ಮಂಜುನಾಥ ಗಾವರವಾಡ ಮಾಧ್ಯಮದ ಬಳಿ ತಮ್ಮ ಅಳಲು ತೋಡಿಕೊಂಡರು.

ಸಿಎಂ ಜತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ, ಶಾಸಕ ಎಚ್.ಕೆ ಪಾಟೀಲ, ಶಾಸಕ ಸಿ.ಸಿ. ಪಾಟೀಲ, ಡಾ.ಚಂದ್ರು ಲಮಾಣಿ, ಎಸ್.ವಿ. ಸಂಕನೂರ ಸೇರಿದಂತೆ ಅನೇಕ ಅಧಿಕಾರಿಗಳು ಸಾಥ್ ನೀಡಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !