ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಕರ ಪ್ರವಾಹಕ್ಕೆ ತತ್ತರಿಸಿರುವ ನೇಪಾಳಕ್ಕೆ ನೆರವು ನೀಡಲು 5.5 ಟನ್ ಅಗತ್ಯ ಔಷಧಗಳನ್ನು ಹೊತ್ತಿರುವ ಭಾರತೀಯ ವಿಮಾನವೊಂದು ನೇಪಾಳದತ್ತ ಪ್ರಯಾಣ ಬೆಳೆಸಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ನೆರವು ನೀಡುತ್ತಿರುವ ಈ ಐದನೇ ವಿಮಾನದಲ್ಲಿ 11 ಸದಸ್ಯರ ವಿಶೇಷ ರಕ್ಷಣಾ ತಂಡ, ಅಗತ್ಯವಿರುವ ಮೆಡಿಸಿನ್ಸ್ ಇದೆ. ಇದರ ಜೊತೆಗೆ ಕೆಲವು ವಿಶೇಷ ಉಪಕರಣಗಳೂ ಇದ್ದು, ಕಷ್ಟಸಮಯದಲ್ಲಿ ನಿಮ್ಮ ಜೊತೆ ಭಾರತ ನಿಂತಿದೆ ಎಂದು ಭರವಸೆ ನೀಡಿದ್ದಾರೆ.
ನೇಪಾಳದ ಪ್ರಳಯದಿಂದಾಗಿ ಈವರೆಗೂ ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ, ಇನ್ನೂ ಲಕ್ಷಾಂತರ ಮಂದಿ ಅವಶೇಷಗಳಡಿ ಸಿಲುಕಿರು ಸಾಧ್ಯತೆ ಇದೆ. ಸದ್ಯ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ಭಾರತದ ʼನೇಬರ್ಹುಡ್ ಫಸ್ಟ್ʼ ಎನ್ನುವ ನೀತಿಯ ಅನ್ವಯ ಸಹಾಯಹಸ್ತ ಚಾಚಲಾಗುತ್ತಿದೆ.
95 ಮೃತದೇಹಗಳ ಗುರುತು ಪತ್ತೆ
ನೇಪಾಳ ಪೊಲೀಸರ ಪ್ರಕಾರ, ರಸುವಾದಿಂದ 45, ನುವಾಕೋಟ್ನಿಂದ 155, ಧಾಡಿಂಗ್ನಿಂದ 59, ಚಿತ್ವಾನ್ನಿಂದ 348, ಗೂರ್ಖಾದಿಂದ 66, ತನಹುನ್ನಿಂದ 38, ನವಲ್ಪರಾಸಿ ಪೂರ್ವದಿಂದ 217 ಮತ್ತು ನವಲ್ಪರಾಸಿ ಪಶ್ಚಿಮದಿಂದ 190 ಮೃತದೇಹಗಳನ್ನು ಹೊರಕ್ಕೆ ತೆಗೆಯಲಾಗಿದೆ. ಪತ್ತೆಯಾಗಿರುವ ಮೃತದೇಹಗಳಲ್ಲಿ ಈವರೆಗೂ 95 ದೇಹಗಳ ಗುರುತು ಮಾತ್ರ ಪತ್ತೆಯಾಗಿದ್ದು, ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
ಡಿಎನ್ಎ ಮಾದರಿಗಳ ಸಂರಕ್ಷಣೆ
ಇನ್ನುಳಿದ ಮೃತದೇಹಗಳನ್ನು ಕಾನೂನಿನ ಹಾಗೂ ವೈಜ್ಞಾನಿಕ ಕಾರ್ಯವಿಧಾನಗಳನ್ನು ಅನುಸರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ನೇಪಾಳ ಪ್ರಧಾನಿ ಬಲೇಂದ್ರ ಶಾ ಮಾಹಿತಿ ನೀಡಿದ್ದಾರೆ. ಗುರುತಿಸಲು ಸಾಧ್ಯವೇ ಇಲ್ಲ ಎನ್ನುವಂತವರ ಅಂತ್ಯಕ್ರಿಯೆಯನ್ನು ಸರ್ಕಾರ ನೆರವೇರಿಸುತ್ತದೆ. ಆದರೆ ಅವರ ಡಿಎನ್ಎ ಮಾದರಿಗಳನ್ನು ಸಂರಕ್ಷಣೆ ಮಾಡಲಾಗುತ್ತದೆ. ಸದ್ಯ ನೇಪಾಳ ಪೊಲೀಸರು, ಸೇನೆ ಹಾಗೂ ಸಶಸ್ತ್ರ ಪೊಲೀಸ್ ಪಡೆಗಳ ಸಹಾಯದಿಂದ ಮೃತದೇಹಗಳ ಅಂತ್ಯಕ್ರಿಯೆ ಪ್ರಕ್ರಿಯೆ, ಗುರುತಿಸುವಿಕೆಯನ್ನು ಮಾಡುತ್ತಿದ್ದಾರೆ.



