ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಗುವಿಗೆ ಹಿತವಲ್ಲದ ಆಹಾರವನ್ನು ತಾಯಿ ದೂರವಿಡುವಂತೆ, ಪ್ರಕೃತಿಯೂ ಜೀವಿಗೆ ಹಿತವಲ್ಲದ ಆಹಾರಗಳನ್ನು ನಮ್ಮಿಂದ ದೂರವಿಟ್ಟಿರುತ್ತದೆ. ನಮಗೆ ಹಿತವಾದದ್ದು ರಮಣೀಯವಾಗಿದ್ದರೆ, ಪ್ರಿಯವಾದ ಆಹಾರ ಮರಣೀಯವಾಗಬಹುದು. ಹೀಗಾಗಿ ಪ್ರಿಯ ಮತ್ತು ಹಿತ ಆಹಾರಗಳ ನಡುವಿನ ವ್ಯತ್ಯಾಸವನ್ನು ಅರಿತು ಆಹಾರ ಸೇವಿಸಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಶುಕ್ರವಾರದ ಧರ್ಮಸಭೆಯ ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಶ್ರೀಗಳು ಪ್ರವಚನ ಅನುಗ್ರಹಿಸಿದರು.

ಔಷಧದ ಅಂಗಡಿಯಲ್ಲಿ ಹಲವು ಔಷಧಗಳಿದ್ದರೂ ಎಲ್ಲವೂ ಎಲ್ಲರಿಗೂ ಸೂಕ್ತವಲ್ಲ. ಅದೇ ರೀತಿ ಸೃಷ್ಟಿಯಲ್ಲಿರುವ ಎಲ್ಲ ಆಹಾರ ಪದಾರ್ಥಗಳೂ ಎಲ್ಲರಿಗೂ ಹಿತಕರವಲ್ಲ ಎಂದರು. ಆಯುರ್ವೇದದಲ್ಲಿ ವ್ಯಕ್ತಿಯ ದೇಹಕ್ಕೆ ಸೂಕ್ತವಾದ ಆಹಾರವನ್ನು ‘ಹಿತಾಹಾರ’ ಎಂದು ಕರೆಯಲಾಗುತ್ತದೆ. ಪ್ರಕೃತಿ ನಮಗಾಗಿ ನೀಡಿರುವುದು ‘ನಿಹಿತ’ ಹಾಗೂ ಶಾಸ್ತ್ರಗಳು ಸೂಚಿಸಿರುವುದು ‘ವಿಹಿತ’ ಎಂದು ವಿವರಿಸಿದ ಅವರು, ಆಹಾರವನ್ನು ಸೂಕ್ತ ಪದಾರ್ಥಗಳೊಂದಿಗೆ ಸಂಯೋಜಿಸಿ, ಅದರ ದೋಷಗಳನ್ನು ನಿವಾರಿಸಿ ಹಿತವಾದ ರೀತಿಯಲ್ಲಿ ಸೇವಿಸುವುದು ಮನುಷ್ಯನ ವಿಶೇಷತೆ ಎಂದರು.

ಕೆಲವು ಪದಾರ್ಥಗಳನ್ನು ಆಯುರ್ವೇದವು ಶ್ರೇಷ್ಠ ಪಥ್ಯಗಳಲ್ಲಿ ಶ್ರೇಷ್ಠ ಎಂದು ಸೂಚಿಸಿದೆ. ಆದರೆ ಹಾಗೆ ಸೂಚಿಸಿದ ಹಲವಾರು ಪದಾರ್ಥಗಳು ಇಂದು ಕಲಿಯ ಪ್ರಭಾವಕ್ಕೆ ಒಳಗಾಗಿ ಸೇವಿಸಲು ಯೋಗ್ಯವೇ? ಎಂದು ಪ್ರಶ್ನಿಸಿಕೊಳ್ಳುವಂತಾಗಿದೆ. ಇಂದು ಹಾಲು, ದ್ರಾಕ್ಷಿ, ಸಕ್ಕರೆ ಸೇರಿದಂತೆ ಹಲವು ಆಹಾರ ಪದಾರ್ಥಗಳು ಕಲುಷಿತವಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪರಿಶುದ್ಧ ಹಾಗೂ ಹಿತಕರ ಆಹಾರವನ್ನು ಹುಡುಕಿ ಸೇವಿಸುವ ಅಗತ್ಯವಿದೆ ಎಂದು ಶ್ರೀಗಳು ಹೇಳಿದರು.

ಆಯುರ್ವೇದ ಮತ್ತು ಯೋಗಶಾಸ್ತ್ರದ ಮಾರ್ಗದರ್ಶನದಂತೆ ಆಹಾರದ ಕುರಿತು ಸಮಾಜಕ್ಕೆ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದ ‘ಅನ್ನಂ ಬ್ರಹ್ಮ’ ಪ್ರವಚನ ಮಾಲಿಕೆ ನಡೆಸಲಾಗುತ್ತಿದೆ. ಕೆಲವರು ಟೀಕಿಸಿದರೂ ಸಮಾಜಕ್ಕೆ ಸರಿದಾರಿ ತೋರಿಸುವುದು ನಮ್ಮ ಕರ್ತವ್ಯ ಎಂದು ರಾಘವೇಶ್ವರ ಶ್ರೀ ತಿಳಿಸಿದರು.

ನಿವೃತ್ತ ಪೋಲಿಸ್ ಅಧಿಕಾರಿಗಳು ಹಾಗೂ ಶ್ರೀಮಠದ ಮಾಜಿ ಸಿ.ಇ.ಓ ಕೆ.ಜಿ. ಭಟ್, ಈಶ್ವರೀ ಬೇರ್ಕಡವು, ವಾದಿರಾಜ ಸಾಮಗ, ಮಂಜುನಾಥ ಭಟ್, ಚಂಪಕಾ ಭಟ್, ಸ್ವಾತಿ ಭಾಗ್ವತ್, ವೇಣು ನವಿಲಗೋಣ, ಸದಾನಂದ ಹೆಬ್ಬಾರ್, ದಿನಪ್ರಧಾನರಾಗಿ ರಾಧಾಕೃಷ್ಣ ಬಂದಗದ್ದೆ ದಂಪತಿ ಉಪಸ್ಥಿತರಿದ್ದರು.



