ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗ ಎಲ್ಲಾ ಕಡೆ SIR ಪ್ರಕ್ರಿಯೆ ನಡೆಯುತ್ತಿದ್ದು, ಇದರಡಿಯಲ್ಲಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಬೆಂಗಳೂರಿನ ಬಹುಕಾಲದ ನಿವಾಸಿಗಳ ಹೆಸರು ನಾಪತ್ತೆಯಾಗಿರುವುದು ಹಲವು ಚರ್ಚೆಗಳನ್ನು ಹುಟ್ಟುಹಾಕಿವೆ.
ಅಧಿಕಾರಿಯ ಹೆಸರೇ ನಾಪತ್ತೆ
ಮಾಜಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಡಾ. ಶರತ್ ಚಂದ್ರ ಅವರ ಹೆಸರೇ ಕರಡು ಪಟ್ಟಿಯಲ್ಲಿ ‘ನೋ ಮ್ಯಾಪಿಂಗ್’ ಎಂದು ತೋರಿಸಿರುವುದು ಗಮನ ಸೆಳೆದಿದೆ. ಇಷ್ಟೇ ಅಲ್ಲದೆ ಅವರ ಪತ್ನಿ ಹಾಗೂ ಮಾಜಿ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ ನಿರ್ದೇಶಕಿ ಡಾ. ಪ್ರೇಮಲತಾ ಅವರ ಹೆಸರೂ ಕರಡು ಪಟ್ಟಿಯಲ್ಲಿ ಕಾಣಿಸಿಲ್ಲ.
ಅಮರಜ್ಯೋತಿ ಲೇಔಟ್ ನಿವಾಸಿಯಾಗಿರುವ ಡಾ. ಶರತ್ ಚಂದ್ರ, 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸ್ಪಷ್ಟವಾಗಿ ಇರುವುದಾಗಿ ಹೇಳಿದ್ದಾರೆ. ಅಲ್ಲದೆ ಅವರ ಪತ್ನಿ 2002ರಿಂದ ಮತ ಚಲಾಯಿಸುತ್ತಿದ್ದು, SIR ಅರ್ಜಿಯಲ್ಲಿ ಹೆಸರಿಲ್ಲದಿರುವುದು ಗೊಂದಲ ಉಂಟಾಗಿದೆ.
ತಪ್ಪಿಗೆ ಯಾರು ಹೊಣೆ
ಮತದಾರರ ಅರ್ಹತೆಯನ್ನು ಸಾಬೀತುಪಡಿಸಲು 11 ದಾಖಲೆಗಳ ಪೈಕಿ ಯಾವುದಾದರೂ ಒಂದು ಸಲ್ಲಿಸುವಂತೆ ಅವರಿಗೆ ನೋಟಿಸ್ ನೀಡಲಾಗಿದೆ. ತಪ್ಪು ಮಾಹಿತಿ ನೀಡಿದರೆ ಶಿಕ್ಷೆ ವಿಧಿಸಲಾಗುತ್ತದೆ ಎಂದು ನೋಟಿಸ್ನಲ್ಲಿ ನೀಡಿರುವುದನ್ನು ಪ್ರಶ್ನಿಸಿರುವ ಅವರು, ಅಸ್ತಿತ್ವದಲ್ಲಿರುವ ಮತದಾರರ ಹೆಸರನ್ನು ‘ನೋ ಮ್ಯಾಪಿಂಗ್’ ಎಂದು ತೋರಿಸಿರುವ ತಪ್ಪಿಗೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ, ರಾಜ್ಯದಲ್ಲಿ ‘ಅನಾಮಲಿ/ಲಾಜಿಕಲ್ ಡಿಸ್ಕ್ರೆಪೆನ್ಸಿ’ ಮತ್ತು ‘ನೋ ಮ್ಯಾಪಿಂಗ್’ ವಿಭಾಗದಲ್ಲಿ 43,81,143 ಮತದಾರರಿಗೆ ನೋಟಿಸ್ ನೀಡಬೇಕಿದ್ದು, ಈವರೆಗೆ 7,31,770 ನೋಟಿಸ್ಗಳನ್ನು ಮಾತ್ರ ವಿತರಿಸಲಾಗಿದೆ. ಉಳಿದ 36,49,373 ನೋಟಿಸ್ಗಳ ವಿತರಣೆ ಬಾಕಿಯಿದೆ.



