ಮಳೆಗಾಲ ಬಂದ ಕೂಡಲೇ ತಂಪಾದ ಹವಾಮಾನ ಸೃಷ್ಟಿಯಾಗುತ್ತದೆ. ಇಂತಹ ಸಮಯದಲ್ಲಿ ಫ್ಯಾನ್ ಅಥವಾ ಕೂಲರ್ ಅವಶ್ಯಕತೆ ಕಡಿಮೆಯಾಗುತ್ತದೆ. ಆದರೆ ಕೆಲವರಿಗೆ ಎಸಿಯಿಲ್ಲದೆ ಇರೋದು ಕಷ್ಟ. ಕಚೇರಿ, ಮನೆ ಅಥವಾ ವಾಹನ ಎಲ್ಲೆಡೆ ಎಸಿ ಬಳಸುವವರ ಸಂಖ್ಯೆ ಕಡಿಮೆ ಇಲ್ಲ. ಆದರೆ ಮಳೆಗಾಲದಲ್ಲಿ ಎಸಿ ಬಳಸುವಾಗ ಕೆಲವು ವಿಶೇಷ ಮುನ್ನೆಚ್ಚರಿಕೆಗಳನ್ನು ಪಾಲಿಸದಿದ್ದರೆ ಆರೋಗ್ಯಕ್ಕೂ, ಎಸಿಯ ಆಯುಷ್ಯಕ್ಕೂ ಹಾನಿ ಉಂಟಾಗಬಹುದು.
ಎಸಿಯ ತಾಪಮಾನ ಸರಿಹೊಂದಿಸಿಕೊಳ್ಳಿ
ಬೇಸಿಗೆಯಲ್ಲಿ ಎಸಿಯನ್ನು 18-20 ಡಿಗ್ರಿಗೆ ಇಳಿಸುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಹೊರಗಿನ ತಾಪಮಾನ ಈಗಾಗಲೇ ಕಡಿಮೆಯಿರುವುದರಿಂದ 24-26 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇಡುವುದು ಸೂಕ್ತ. ಇದು ದೇಹಕ್ಕೆ ಆರಾಮ ನೀಡುವುದರ ಜೊತೆಗೆ ವಿದ್ಯುತ್ ಖರ್ಚು ಕಡಿಮೆ ಮಾಡುತ್ತದೆ.

ಸ್ಟೆಬಿಲೈಜರ್ ಬಳಸಿ
ಮಳೆಗಾಲದಲ್ಲಿ ಮಿಂಚು ಮತ್ತು ವೋಲ್ಟೇಜ್ ಏರಿಳಿತ ಹೆಚ್ಚಾಗುತ್ತದೆ. ಇದರಿಂದ ಎಸಿಗೆ ಹಾನಿಯಾಗುವ ಸಾಧ್ಯತೆ ಇದೆ. ಆದ್ದರಿಂದ ಉತ್ತಮ ಗುಣಮಟ್ಟದ ವೋಲ್ಟೇಜ್ ಸ್ಟೆಬಿಲೈಜರ್ ಬಳಸಿ ರಕ್ಷಣೆ ಪಡೆಯುವುದು ಅಗತ್ಯ.
ಡ್ರೈ ಮೋಡ್ ಉಪಯೋಗಿಸಿ
ಮಳೆಗಾಲದಲ್ಲಿ ಆರ್ದ್ರತೆ ಹೆಚ್ಚಾಗುವುದು ಸಾಮಾನ್ಯ. ಎಸಿಯಲ್ಲಿರುವ ಡ್ರೈ ಮೋಡ್ ಬಳಸುವುದರಿಂದ ಗಾಳಿಯ ತೇವಾಂಶ ಕಡಿಮೆಯಾಗುತ್ತದೆ ಮತ್ತು ಕೊಠಡಿ ತಂಪಾಗಿ ಉಳಿಯುತ್ತದೆ. ಕೂಲ್ ಮೋಡ್ ಬಳಸಿದರೆ ವಿದ್ಯುತ್ ಬಿಲ್ ಹೆಚ್ಚಾಗುವ ಸಾಧ್ಯತೆ ಇದೆ.
ಫಿಲ್ಟರ್ ಸ್ವಚ್ಛಗೊಳಿಸಿ
ಕೊಳಕು ಫಿಲ್ಟರ್‌ಗಳು ಗಾಳಿಯ ಹರಿವನ್ನು ತಡೆಯುತ್ತವೆ. ಇದರಿಂದ ಎಸಿಗೆ ಹೆಚ್ಚು ಒತ್ತಡ ಬಂದು ವಿದ್ಯುತ್ ಬಳಕೆ ಹೆಚ್ಚಾಗುತ್ತದೆ. ಆದ್ದರಿಂದ ನಿಯಮಿತವಾಗಿ ಫಿಲ್ಟರ್ ಸ್ವಚ್ಛಗೊಳಿಸುವುದು ಮುಖ್ಯ.

ಕಾಲಕಾಲಕ್ಕೆ ಸರ್ವಿಸ್ ಮಾಡಿಸಿಕೊಳ್ಳಿ
ಮೆಕ್ಯಾನಿಕ್‌ಗಳು ಗ್ಯಾಸ್ ಮಟ್ಟವನ್ನು ಪರಿಶೀಲಿಸಿ, ಫಿಲ್ಟರ್ ಹಾಗೂ ಇತರ ಭಾಗಗಳನ್ನು ಸ್ವಚ್ಛಗೊಳಿಸಿ, ಸಮಸ್ಯೆಗಳನ್ನು ಮುಂಚಿತವಾಗಿ ಸರಿಪಡಿಸುತ್ತಾರೆ. ಇದು ಎಸಿಯ ಆಯುಷ್ಯವನ್ನು ಹೆಚ್ಚಿಸುತ್ತದೆ.