ಹೊಸದಿಗಂತ ವರದಿ ಕಾರವಾರ:
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಮತ್ತು ಅಂಕೋಲಾ ತಾಲೂಕುಗಳ ನಡುವಿನ ಅರಬೈಲ್ ಘಟ್ಟದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಮೃತಪಟ್ಟು ಓರ್ವ ಗಾಯಗೊಂಡ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಮಹಾರಾಷ್ಟ್ರದ ಪುಣೆಯ ತ್ರಿವೇಣಿನಗರದ ನಿವಾಸಿ ಶರ್ಮಿಳಾ ರಾಜನ್ ಕುಲ್ತೆ(59)ಮತ್ತು ಅವರ ಮಗಳು ಮೃಣ್ಮಯಿ ರಾಜನ್ ಕುಲ್ತೆ(32) ಮೃತ ದುರ್ದೈವಿಗಳಾಗಿದ್ದು ಕಾರು ಚಾಲಕ ಹೊಸಪೇಟೆಯ ಅಲಿಬಾಷಾ ಎನ್ನುವವರು ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ತಾಯಿ ಮತ್ತು ಮಗಳು ಬಾದಾಮಿ ಸುತ್ತ ಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಹೊಸಪೇಟೆಯಿಂದ ಕೆ.ಎ35ಡಿ8298 ನೋಂದಣಿ ಸಂಖ್ಯೆಯ ಕಾರನ್ನು ಬಾಡಿಗೆ ಪಡೆದು ಗೋಕರ್ಣಕ್ಕೆ ಹೊರಟಿದ್ದ ಸಂದರ್ಭದಲ್ಲಿ ಯಲ್ಲಾಪುರ ತಾಲೂಕಿನ ರಾಷ್ಟ್ರೀಯ 52 ಅರಬೈಲ್ ಘಟ್ಟದಲ್ಲಿ ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಅತಿವೇಗದಿಂದ ಬಂದ ಕೆ.ಎ01ಎನ್1281 ನೋಂದಣಿ ಸಂಖ್ಯೆಯ ಲಾರಿ ಕಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಮುಂದಕ್ಕೆ ಹೋದ ಕಾರು ಎದುರಿನಿಂದ ಹೋಗುತ್ತಿದ್ದ ಎಂ.ಎಚ್09ಎಫ್.ಎಲ್8699 ನೋಂದಣಿ ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದು ಎರಡೂ ಲಾರಿಗಳ ನಡುವೆ ಸಿಲುಕಿದ ಕಾರು ಅಪ್ಪಚ್ಚಿಯಾಗಿ ಗಂಭೀರವಾಗಿ ಗಾಯಗೊಂಡ ತಾಯಿ ಮತ್ತು ಮಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಡಿಕರಿಸಿರುವುದಾಗಿ ತಿಳಿದು ಬಂದಿದೆ. ಆರೋಪಿತ ಲಾರಿ ಚಾಲಕ ಪರಾರಿಯಾಗಿದ್ದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



