September 8, 2026
Tuesday, September 8, 2026
spot_img

‘ಶಾಸಕರ ಬಳಿ ಬಹಿರಂಗ ಕ್ಷಮೆ ಕೇಳಲಿ’: ಮಲ್ಲಿಕಾರ್ಜುನ ಹೇಳಿಕೆಗೆ ವಿಜಯೇಂದ್ರ ತೀವ್ರ ಆಕ್ಷೇಪ

ಹೊಸದಿಗಂತ ವರದಿ ಬಳ್ಳಾರಿ:

ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ಬಗ್ಗೆ ಅವಹೇಳಕಾರಿಯಾಗಿ ಅತ್ಯಂತ ಕೆಟ್ಟ ಪದ ಬಳಕೆ ಮಾಡಿದ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ ಅವರು ಕೂಡಲೇ ಶಾಸಕರ ಹಾಗೂ ಕ್ಷೇತ್ರದ ಮತದಾರರಿಗೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಒತ್ತಾಯಿಸಿದರು.

ಬಳ್ಳಾರಿ ಚಲೋ ಪಾದಯಾತ್ರೆ ವೇಳೆ ಕುಡುತಿನಿ ಸಮೀಪ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮ್ಮ ಶಾಸಕ ಬಿ. ಪಿ.ಹರೀಶ್ ಅವರು ಒಳ್ಳೆಯ ಸುಸಂಸ್ಕೃತ ಕುಟುಂಬದಿಂದ ಬಂದವರು, ಸಚಿವ ಮಲ್ಲಿಕಾರ್ಜುನ ಅವರು ಬಳಸಿದ ಶಬ್ದ ಅತ್ಯಂತ ಕೆಟ್ಟ ಪದವಾಗಿದೆ. ಶಾಸಕರಿಗೆ ಸಚಿವ ಮಲ್ಲಿಕಾರ್ಜುನ ಅವರು ಮಾಡಿದ ಅಪಮಾನ, ಅವರಿಗಷ್ಟೇ ಅಲ್ಲ, ಅದು ಕ್ಷೇತ್ರದ ಜನರಿಗೆ ಮಾಡಿದ ಅಪಮಾನವಾಗಿದೆ.

ಅಧಿಕಾರ ಯಾರಿಗೂ ಶಾಶ್ವತವಲ್ಲ, ಕೇವಲ ಶಾಸಕ ಹರೀಶ್ ಅವರಿಗೆ ಮಾಡಿದ ಅಪಮಾನವಲ್ಲ ಇದು ಜನರಿಗೆ ಮಾಡಿದ ಅಪಮಾನ, ಒಬ್ಬ ಮಂತ್ರಿಯಾಗಿ ಒಬ್ಬ ಶಾಸಕರಿಗೆ ಕೆಟ್ಟ ಪದ ಬಳಸಿರುವುದು, ಅಕ್ಷಮ್ಯ ಅಪರಾಧ. ಈ ರೀತಿ ಒಬ್ಬ ಸಚಿವರು ಬಹಿರಂಗವಾಗಿ ಶಾಸಕರ ವಿರುದ್ಧ ಕೆಟ್ಟ ಪದ ಬಳಕೆ ಮಾಡಿರುವುದು ಇತಿಹಾಸದಲ್ಲೇ ಇಲ್ಲ, ರಾಜಕಾರಣದಲ್ಲಿ ಪರ ವಿರೋಧ ಸಾಮಾನ್ಯ. ಆದರೆ, ಒಬ್ಬ ಸಚಿವರು ಶಾಸಕರ ವಿರುದ್ಧ ಇಂತಹ ಕೆಟ್ಟ ಶಬ್ದ ಬಳಸಿರುವುದು ಸರಿಯಲ್ಲ, ಸಚಿವರ ಈ ಹೇಳಿಕೆ ತಂದೆ ಹಾಗೂ ತಾಯಿಗೆ ಕ್ಷೇತ್ರದ ಜನರಿಗೆ ಮಾಡಿದ ಅಪಮಾನವಾಗಿದೆ. ಕೂಡಲೇ ಸಚಿವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಎಚ್ಚರಿಸಿದರು.

ಇದನ್ನೂ ಓದಿ:

ನಮ್ಮ ಬಳ್ಳಾರಿ ಚಲೋ ಪಾದಯಾತ್ರೆಯ ಸಮಾವೇಶ, ಬೃಹತ್ ಬಹಿರಂಗ ಸಮಾರಂಭ ನಿಗದಿಯಂತೆ ಬಳ್ಳಾರಿಯಲ್ಲಿ ನಡೆಸಲು ಮುಂದಾದರೆ, ಜಿಲ್ಲಾಡಳಿತ ಆಡಳಿತ ರಾಜ್ಯ ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಪರವಾನಿಗೆ ನೀಡಲು ಮೀನ ಮೇಷ ಏಣಿಸಿತು.

ಡಿಸಿ ಅವರು ಒತ್ತಡಕ್ಕೆ ಸಿಲುಕಿ ಅನುಮತಿ ನಿರಾಕರಿಸಿದ್ದರು. ನಮ್ಮ ಹೋರಾಟಕ್ಕೆ ಮಣಿದು ಜಿಲ್ಲಾಡಳಿತೆ ಅದೇ ಸ್ಥಳದಲ್ಲೇ ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದೆ. ಅನುಮತಿ ನೀಡದಿದ್ದರೆ ನಾವು ಡಿಸಿ ಕಚೇರಿ ಎದುರೇ ಸಮಾವೇಶ ನಡೆಸಲು ತೀರ್ಮಾನಿಸಿದೆವು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹೋರಾಟಕ್ಕೆ ಯಾರ ಮೇಲೂ ಪ್ರಭಾವ ಬೀರಬಾರದು, ನಾವು ಇಡೀ ಪಾದಯಾತ್ರೆಯ ಉದ್ದಕ್ಕೂ ಎಲ್ಲೂ ಗೊಂದಲ ಮಾಡಿಲ್ಲ, ಶಾಂತಿಯುತವಾಗಿಯೇ ನಡೆದುಕೊಂಡು ಬಂದಿದ್ದೇವೆ. ಇದಕ್ಕೆ ಉದ್ದೇಶ ಪೂರ್ವಕವಾಗಿ ಕಾಂಗ್ರೆಸ್ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸಕ್ಕೆ ಕೈಹಾಕಿರುವುದು ಸರಿಯಲ್ಲ. ಯಾರು ಹೀಗೆ ಮಾಡಬಾರದು, ಎಂದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !