ಹೊಸದಿಗಂತ ವರದಿ ಬೆಳಗಾವಿ :
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರು ಮತ್ತು ಬೆಳಗಾವಿ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)–1999ರ ಅಡಿಯಲ್ಲಿ ಸಚಿವರು ಹಾಗೂ ಅವರ ಆಪ್ತರ ಮನೆಗಳ ಮೇಲೆ ಈ ದಾಳಿ ನಡೆದಿದ್ದು, ವಿದೇಶಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹೂಡಿಕೆಗಳ ಕುರಿತು ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.
ಮಂಜುನಾಥ್ ಪ್ರಕರಣ ಪ್ರತ್ಯೇಕ
ಬುಧವಾರ ಬೆಳಿಗ್ಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಸಚಿವರ ನಿವಾಸದ ಮೇಲೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದ ಬೆನ್ನಲ್ಲೇ, ಈ ಕ್ರಮವು ಜೂನ್‌ನಲ್ಲಿ ನಡೆದಿದ್ದ ‘ಮಂಜುನಾಥ್ ಪ್ರಕರಣ’ದ ಮುಂದುವರಿದ ಭಾಗ ಎಂಬ ವಹಾಪೋಹಗಳು ಹರಡಿದ್ದವು. ಜೂನ್‌ನಲ್ಲಿ ಬೆಂಗಳೂರು-ಬೆಳಗಾವಿ, ಮೈಸೂರು ಹಾಗೂ ಅಥಣಿಯಲ್ಲಿ ನಡೆದ ಶೋಧದ ವೇಳೆ ಅಬಕಾರಿ ಪರವಾನಗಿ ಅಕ್ರಮ, ಬೇನಾಮಿ ಬಾರ್ ಲೈಸೆನ್ಸ್ ಹಾಗೂ ಅಕ್ರಮ ಹಣಕಾಸು ವಹಿವಾಟುಗಳ ಬಗ್ಗೆ ಇಡಿ ತನಿಖೆ ನಡೆಸಿತ್ತು. ಆದರೆ, ಇದೀಗ ಜಾರಿ ನಿರ್ದೇಶನಾಲಯವು ಅಧಿಕೃತ ಸ್ಪಷ್ಟನೆ ನೀಡಿದ್ದು, “ಮಂಜುನಾಥ್ ಪ್ರಕರಣಕ್ಕೂ ಹಾಗೂ ಸತೀಶ್ ಜಾರಕಿಹೊಳಿ ಅವರ ನಿವಾಸಗಳ ಮೇಲಿನ ದಾಳಿಗೂ ಯಾವುದೇ ಸಂಬಂಧವಿಲ್ಲ; ಇವೆರಡೂ ಸಂಪೂರ್ಣ ಪ್ರತ್ಯೇಕ ಪ್ರಕರಣಗಳು” ಎಂದು ಸ್ಪಷ್ಟಪಡಿಸಿದೆ.
ವಿದೇಶಿ ಅಕ್ರಮ ಹೂಡಿಕೆ ಶಂಕೆ
ಇಡಿ ನೀಡಿರುವ ಮಾಹಿತಿಯಂತೆ, ದಕ್ಷಿಣ ಆಫ್ರಿಕಾ ಮತ್ತು ಉಗಾಂಡ ಸೇರಿದಂತೆ ವಿವಿಧ ವಿದೇಶಗಳಲ್ಲಿ ಅಕ್ರಮವಾಗಿ ಹೂಡಿಕೆ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಪ್ರತ್ಯೇಕ ತನಿಖೆ ನಡೆಯುತ್ತಿದೆ. ಈ ವಿದೇಶಿ ಹೂಡಿಕೆಗಳಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹಣ ರವಾನೆಯಾಗಿದೆಯೇ ಮತ್ತು ಅಕ್ರಮ ಹಣಕಾಸು ವಹಿವಾಟು ನಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ.



