September 9, 2026
Wednesday, September 9, 2026
spot_img

ನಾಗಮಂಗಲ ಬಳಿ KSRTC ಬಸ್-ಟ್ರ್ಯಾಕ್ಟರ್ ನಡುವೆ ಅಪಘಾತ; ಚಾಲಕ ಸಾ*ವು, 8 ಮಂದಿ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ವರಾಹಸಂದ್ರ ಗೇಟ್ ಬಳಿ ಬುಧವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಬ್ಬಿಣದ ಸರಳುಗಳನ್ನು ಹೊತ್ತು ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ KSRTC ಬಸ್ ಡಿಕ್ಕಿ ಹೊಡೆದ ಪರಿಣಾಮ, ಬಸ್ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದು, ಹತ್ತಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಘಟನೆಯ ವಿವರ

ಹಾಸನ ಮೂಲದ ಶೇಖರ್ ಮೃತ ದುರ್ದೈವಿ. ಈತ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿದ್ದು, ನಾಗಮಂಗಲ ತಾಲೂಕಿನ ವರಾಹಸಂದ್ರ ಗೇಟ್ ತಲುಪಿದಾಗ, ಬಸ್ ನಿಯಂತ್ರಣ ತಪ್ಪಿ ಮುಂದೆ ಸಾಗುತ್ತಿದ್ದ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತರಗರ ಟ್ರ್ಯಾಕ್ಟರ್‌ನಲ್ಲಿದ್ದ ಕಬ್ಬಿಣದ ಸರಳುಗಳು ಬಸ್‌ನ ಮುಂಭಾಗದ ಗ್ಲಾಸ್ ಅನ್ನು ಸೀಳಿಕೊಂಡು ನೇರವಾಗಿ ಚಾಲಕ ಶೇಖರ್ ಅವರ ಹೊಟ್ಟೆಯ ಭಾಗಕ್ಕೆ ಚುಚ್ಚಿವೆ. ಇದರ ಪರಿಣಾಮ ಅವರು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

8 ಮಂದಿ ಪ್ರಯಾಣಿಕರ ಸ್ಥತಿ ಗಂಭೀರ

ಬಸ್‌ನಲ್ಲಿದ್ದ ಪ್ರಯಾಣಿಕರ ಪೈಕಿ 10 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಅವರಲ್ಲಿ ಎಂಟು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಸ್ಥಳೀಯರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದು, ಗಾಯಾಳುಗಳನ್ನು ಬೆಳ್ಳೂರಿನ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ:

ಸ್ಥಳಕ್ಕೆ ಪೊಲೀಸರ ಭೇಟಿ

ಈ ಅವಘಡದಲ್ಲಿ ಬಸ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಕಬ್ಬಿಣದ ಸರಳುಗಳು ಬಸ್‌ನ ಒಳಭಾಗದವರೆಗೆ ನುಗ್ಗಿರುವುದು ಕಂಡುಬಂದಿದೆ. ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್‌ನ ಮುಂಭಾಗವು ರಸ್ತೆಯ ಮೇಲೆ ಉರುಳಿಬಿದ್ದಿದೆ. ಈ ಅಪಘಾತವು ಬೆಳ್ಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !