September 9, 2026
Wednesday, September 9, 2026
spot_img

ರಾಜ್ಯದ ಉದ್ಯಮ ರಂಗಕ್ಕೆ ಹೊಸ ವೇಗ: ಏರೋಸ್ಪೇಸ್ ನೀತಿ, ‘ಶ್ರಮಿಕ ನಿವಾಸ’ ಯೋಜನೆಗೆ ಸಚಿವ ಸಂಪುಟ ಅಸ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜ್ಯದ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ವೇಗ ನೀಡಲು ಮತ್ತು ಹಿಂದುಳಿದ ತಾಲೂಕುಗಳಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತು ರೈತರಿಗೆ ನೆರವಾಗುವ ಉದ್ದೇಶದಿಂದ ರಾಜ್ಯ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ಕರ್ನಾಟಕ ಏರೋಸ್ಪೇಸ್ ನೀತಿ 2026-31’, ಕಾರ್ಮಿಕರಿಗಾಗಿ ‘ಶ್ರಮಿಕ ನಿವಾಸ’ ಯೋಜನೆ ಹಾಗೂ ರೈತರಿಗಾಗಿ ʼಮುಖ್ಯಮಂತ್ರಿ ನೇಗಿಲ ಯೋಗಿʼ ಯೋಜನೆಗಳಿಗೆ ಅಧಿಕೃತ ಅನುಮೋದನೆ ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಕರ್ನಾಟಕ ಏರೋಸ್ಪೇಸ್ ನೀತಿ 2026-31

ರಾಜ್ಯದಲ್ಲಿ ಬಾಹ್ಯಾಕಾಶ ಮತ್ತು ರಕ್ಷಣಾ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಉತ್ತೇಜಿಸಲು ಈ ಹೊಸ ನೀತಿಯನ್ನು ತರಲಾಗಿದೆ. ಬೆಂಗಳೂರು ಈಗಾಗಲೇ ಜಾಗತಿಕ ಏರೋಸ್ಪೇಸ್ ಹಬ್ ಆಗಿ ಹೊರಹೊಮ್ಮುತ್ತಿದ್ದು, ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ 40 ವಿಮಾನಗಳನ್ನು ಹಾಗೂ ಹೆಚ್‌ಎಎಲ್ 97 ಲಘು ಯುದ್ಧ ವಿಮಾನಗಳನ್ನು ಇಲ್ಲಿ ತಯಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ವಲಯದ ಕೈಗಾರಿಕೆಗಳಿಗೆ ಸರ್ಕಾರ ವಿಶೇಷ ಸಬ್ಸಿಡಿಗಳನ್ನು ನೀಡಲಿದೆ.

ಕಾರ್ಮಿಕರಿಗೆ ‘ಶ್ರಮಿಕ ನಿವಾಸ’ ಭಾಗ್ಯ

ಕಾರ್ಮಿಕರು ತಾವು ಕೆಲಸ ಮಾಡುವ ಕಾರ್ಖಾನೆಗಳ ಬಳಿಯೇ ನೆಮ್ಮದಿಯಿಂದ ಜೀವಿಸಲು ಅನುವಾಗುವಂತೆ ‘ಶ್ರಮಿಕ ನಿವಾಸ’ ಯೋಜನೆಕ್ಕೆ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ 10,000 ಮನೆಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದ್ದು, ಸರ್ಕಾರ ನೀಡುವ ಸಬ್ಸಿಡಿ ನೆರವಿನೊಂದಿಗೆ ಸಂಬಂಧಪಟ್ಟ ಕಂಪನಿಗಳೇ ಈ ವಸತಿ ಕಟ್ಟಡಗಳನ್ನು ನಿರ್ಮಿಸಲಿವೆ.

ಹಿಂದುಳಿದ ತಾಲೂಕುಗಳಿಗೆ ಬಂಪರ್ ಕೊಡುಗೆ

ಪ್ರಖ್ಯಾತ ಅರ್ಥಶಾಸ್ತ್ರಜ್ಞ ಎಂ. ಗೋವಿಂದ ರಾವ್ ಸಮಿತಿ ನೀಡಿರುವ ವರದಿ ಆಧಾರದ ಮೇಲೆ, ರಾಜ್ಯದ ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಭರ್ಜರಿ ಪ್ರೋತ್ಸಾಹಧನ ಘೋಷಿಸಲಾಗಿದೆ. ಹಿಂದುಳಿದ ತಾಲೂಕುಗಳಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ಶೇ. 10 ರಷ್ಟು ಹಾಗೂ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಉದ್ಯಮ ಆರಂಭಿಸುವವರಿಗೆ ಶೇ. 20 ರಷ್ಟು ಆರ್ಥಿಕ ಪ್ರೋತ್ಸಾಹಧನ ಸಿಗಲಿದೆ.

ಏರೋಸ್ಪೇಸ್, ರಕ್ಷಣೆ, ಆಟೋಮೊಬೈಲ್, ಎಲೆಕ್ಟ್ರಿಕ್ ವಾಹನ (EV), ಎಲೆಕ್ಟ್ರಾನಿಕ್ಸ್ ಮತ್ತು ಸೆಮಿಕಂಡಕ್ಟರ್ ಉದ್ಯಮಗಳಿಗೆ ಇಲ್ಲಿ ಆದ್ಯತೆ ನೀಡಲಾಗುವುದು. ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವ ಕಂಪನಿಗಳಿಗೆ ನೆರವಾಗಲು, ಸರ್ಕಾರವು ಪ್ರತಿ ಉದ್ಯೋಗಿಗೆ ಎರಡು ವರ್ಷಗಳ ಕಾಲ ತಲಾ 2,500 ರೂಪಾಯಿ ಇಪಿಎಫ್ ಪ್ರೋತ್ಸಾಹಧನವನ್ನು ನೀಡಲಿದೆ.

ತಾಲೂಕು ಆಸ್ಪತ್ರೆಗಳ ಡಿಜಿಟಲೀಕರಣ

ಗ್ರಾಮೀಣ ಭಾಗದ ಆರೋಗ್ಯ ರಕ್ಷಣೆಗೆ ಒತ್ತು ನೀಡಿರುವ ಸರ್ಕಾರ, ತಾಲೂಕು ಆಸ್ಪತ್ರೆಗಳ ಎಕ್ಸ್-ರೇ ಮತ್ತು ಇಸಿಜಿ (ECG) ಸೇರಿದಂತೆ ರೋಗನಿರ್ಣಯದ ದತ್ತಾಂಶಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲು ನಿರ್ಧರಿಸಿದೆ. ತಾಂತ್ರಿಕ ನೆರವು ಮತ್ತು ಅತ್ಯಾಧುನಿಕ ಉಪಕರಣಗಳ ಖರೀದಿಗಾಗಿ 40.5 ಕೋಟಿ ರೂ. ಮಂಜೂರು ಮಾಡಲಾಗಿದೆ. ಇದಲ್ಲದೆ, ಮಕ್ಕಳಲ್ಲಿ ಆರಂಭಿಕ ಹಂತದಲ್ಲೇ ಶ್ರವಣದೋಷ ಪತ್ತೆಹಚ್ಚಲು ರಾಜ್ಯದ 50 ತಾಲೂಕು ಆಸ್ಪತ್ರೆಗಳನ್ನು ವಿಶೇಷ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ:

‘ಮುಖ್ಯಮಂತ್ರಿ ನೇಗಿಲ ಯೋಗಿ’ ಯೋಜನೆಗೆ ಅನುಮೋದನೆ

ಇದೇ ವೇಳೆ ರೈತರಿಗೆ ಕೃಷಿ ವೆಚ್ಚ ತಗ್ಗಿಸಲು ಮತ್ತು ಯಾಂತ್ರೀಕೃತ ಬೇಸಾಯಕ್ಕೆ ಉತ್ತೇಜನ ನೀಡಲು ಸರ್ಕಾರವು 152.278 ಕೋಟಿ ರೂ. ಅನುದಾನದಲ್ಲಿ ‘ಮುಖ್ಯಮಂತ್ರಿ ನೇಗಿಲ ಯೋಗಿ’ ಎಂಬ ವಿನೂತನ ಯೋಜನೆಗೆ ಅನುಮೋದನೆ ನೀಡಿದೆ. ಈ ಯೋಜನೆಯಡಿ ಕನಿಷ್ಠ 20 ಗುಂಟೆ ಜಮೀನು ಹೊಂದಿರುವ ರೈತರು ನೋಂದಾಯಿತ ಸೇವಾ ಪೂರೈಕೆದಾರರಿಂದ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಪಡೆದು ಕೃಷಿ ಚಟುವಟಿಕೆ ನಡೆಸಿದರೆ, ಪ್ರತಿ ಎಕರೆಗೆ 500 ರಂತೆ ಸರ್ಕಾರದಿಂದ ಪ್ರೋತ್ಸಾಹಧನ ಸಿಗಲಿದ್ದು, ಒಬ್ಬ ರೈತ ವರ್ಷಕ್ಕೆ ಗರಿಷ್ಠ 3 ಎಕರೆಗೆ ಒಟ್ಟು 4,500 ರೂ. ವರೆಗೆ ಆರ್ಥಿಕ ನೆರವು ಪಡೆಯಬಹುದು. ಪ್ರಸಕ್ತ ಸಾಲಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ತಲಾ ಒಂದು ತಾಲೂಕಿನಂತೆ ಒಟ್ಟು 31 ತಾಲೂಕುಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !