ಹೊಸದಿಗಂತ ವರದಿ ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲೆಯ ಗೋನೂರು ಗ್ರಾಮದ ಬಳಿಯ ನಿರಾಶ್ರಿತರ ಪರಿಹಾರ ಕೇಂದ್ರ ಅನೇಕ ನಿರಾಶ್ರಿತಯರಿಗೆ ಆಶ್ರಯ ನೀಡುತ್ತಾ ಬಂದಿದೆ. ಅದರಂತೆ ದಾರಿತಪ್ಪಿ ನಿರಾಶ್ರಿತರ ಕೇಂದ್ರ ಸೇರಿದವರಿಗೆ ಸೂಕ್ತ ಶುಶ್ರೂಷೆ ನೀಡಿ, ಅವರ ವಿಳಾಸ ಪತ್ತೆ ಮಾಡಿ, ಅವರನ್ನು ಅವರ ಕುಟುಂಬದ ಜೊತೆ ಸೇರಿಸುವ ಮಹತ್ವದ ಕಾರ್ಯ ಮಾಡುತ್ತಿದೆ. ಅಂತಹದ್ದೇ ಮತ್ತೊಂದು ಹೃದಯ ಸ್ಪರ್ಶಿ ಕ್ಷಣಕ್ಕೆ ನಿರಾಶ್ರಿತರ ಕೇಂದ್ರ ಸಾಕ್ಷಿಯಾಯಿತು.
ಇಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಪ್ರಸ್ತುತ 319 ಪುರುಷರು ಹಾಗೂ 84 ಮಹಿಳೆಯರು ಸೇರಿದಂತೆ ಒಟ್ಟು 403 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ. ಇವರಲ್ಲಿ ಬೇಗಂ ಎಂಬ ಮಹಿಳಾ ನಿರಾಶ್ರಿತೆಯೂ ಒಬ್ಬರು. ಅವರನ್ನು 2019 ರಲ್ಲಿ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ದಾಖಲಿಸಿಕೊಳ್ಳಲಾಯಿತು. ಕೇಂದ್ರಕ್ಕೆ ಬಂದ ಸಂದರ್ಭದಲ್ಲಿ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ತಮ್ಮ ಹೆಸರು, ವಿಳಾಸ ಹಾಗೂ ಕುಟುಂಬದ ಬಗ್ಗೆ ಯಾವುದೇ ಸಮರ್ಪಕ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ.
ನಿರಾಶ್ರಿತರಿಗೆ ಕೇಂದ್ರದಲ್ಲಿ ಅವರಿಗೆ ಮಾನಸಿಕ ವೈದ್ಯಾಧಿಕಾರಿಗಳಿಂದ ನಿಯಮಿತವಾಗಿ ತಪಾಸಣೆ ಮಾಡಿಸಿ, ಅಗತ್ಯ ಚಿಕಿತ್ಸೆ ಹಾಗೂ ಆರೈಕೆಯನ್ನು ನಿರಂತರವಾಗಿ ಒದಗಿಸಲಾಯಿತು. ಇತ್ತೀಚಿನ ಅವಧಿಯಲ್ಲಿ ಆಪ್ತಸಮಾಲೋಚನೆಯ ಮೂಲಕ ಅವರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸಿದ ಪರಿಣಾಮ ಅವರು, ತಮ್ಮ ಕುಟುಂಬ ಹಾಗೂ ಸ್ವಂತ ವಿಳಾಸದ ಕುರಿತು ಅಗತ್ಯ ಮಾಹಿತಿ ನೀಡಲು ಪ್ರಾರಂಭಿಸಿದರು.
ನಂತರ ಕೇಂದ್ರದ ಸಿಬ್ಬಂದಿ ಗಂಗಾವತಿ ಪೊಲೀಸ್ ಸಿಬ್ಬಂದಿಯ ಸಹಕಾರದೊಂದಿಗೆ, ಬೇಗಂ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಕುಟುಂಬಸ್ಥರನ್ನು ಪತ್ತೆ ಹಚ್ಚುವ ಕಾರ್ಯ ಕೈಗೊಂಡರು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಲೆಬೆಳಕಲ್ಲು ಗ್ರಾಮದಲ್ಲಿ ನೆಲೆಸಿರುವ ಕುಟುಂಬಸ್ಥರನ್ನು ಪತ್ತೆಹಚ್ಚಿ, ದೂರವಾಣಿ ಮೂಲಕ ಸಂಪರ್ಕಿಸಿದರು. ಕುಟುಂಬಸ್ಥರಿಗೆ ಬೇಗಂ ಅವರ ಕುರಿತು ಸಂಪೂರ್ಣ ಮಾಹಿತಿ ನೀಡಿ, ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಆಗಮಿಸುವಂತೆ ತಿಳಿಸಲಾಯಿತು.
ಬೇಗಂ ಅವರು ಕುಟುಂಬ ತೊರೆದು ಸುಮಾರು 12 ವರ್ಷಗಳಾಗಿದ್ದು, ಕುಟುಂಬಸ್ಥರು ಅವರನ್ನು ವಿವಿಧ ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದೆವು. ಎಷ್ಟು ಪ್ರಯತ್ನಿಸಿದರೂ ಬೇಗಂ ಅವರ ಯಾವುದೇ ಸುಳಿವು ದೊರೆತಿರಲಿಲ್ಲ. ಇದರಿಂದ ಮನ ನೊಂದ ನಾವು ಬೇಗಂ ಎಲ್ಲೋ ಮೃತಪಟ್ಟಿರಬಹುದು ಎಂದು ಭಾವಿಸಿ ನಿರಾಸೆಯಿಂದ ಸುಮ್ಮನಾಗಿದ್ದೆವು. ಆದರೆ, ನಿರಾಶ್ರಿತರ ಪರಿಹಾರ ಕೇಂದ್ರದಿಂದ ದೂರವಾಣಿ ನಮಗೆ ಕರೆ ಮಾಡಿ, ಬೇಗಂ ಕುರಿತು ಮಾಹಿತಿ ನೀಡಿದಾಗ ತುಂಬಾ ಸಂತೋಷವಾಯಿತು ಎಂದು ಕುಟುಂಬದವರು ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ:
ಈ ಹೃದಯ ಸ್ಪರ್ಶಿ ಕಾರ್ಯದ ಮೂಲಕ ಹಲವು ವರ್ಷಗಳಿಂದ ಕುಟುಂಬದಿಂದ ದೂರವಾಗಿದ್ದ ನಿರಾಶ್ರಿತ ಮಹಿಳೆಯೊಬ್ಬರು ಮತ್ತೆ ತಮ್ಮ ಕುಟುಂಬದೊಂದಿಗೆ ಒಂದಾಗುವಂತಾಯಿತು. ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ನಡೆಯುವ ಇಂತಹ ಇಂತಹ ಮಹತ್ತರ ಕಾರ್ಯಕ್ಕೆ ಮತ್ತೊಂದು ಉತ್ತಮ ಉದಾಹರಣೆ ಎನ್ನಬಹುದು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ್, ಕೇಂದ್ರದ ಅಧೀಕ್ಷಕ ಬಿ.ವಿಜಯಕುಮಾರ್, ಕೇಂದ್ರದ ಮುಖ್ಯಸ್ಥ ಎಂ.ಮಹದೇವಯ್ಯ ಹಾಗೂ ಸಮಸ್ತ ಸಿಬ್ಬಂದಿ ವರ್ಗದವರು ಹಾಜರಿದ್ದರು.



