September 10, 2026
Thursday, September 10, 2026
spot_img

ಜನಪ್ರಿಯ ಸರ್ಕಾರ ಅಲ್ಲ, ಇದು ಜಾಹೀರಾತು ಸರ್ಕಾರ: ಕಾಂಗೆಸ್‌ ವಿರುದ್ಧ ವಿಜಯೇಂದ್ರ ವಾಗ್ದಾಳಿ

ಹೊಸದಿಗಂತ ವರದಿ ಬಳ್ಳಾರಿ:

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ 10 ದಿನಗಳ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಬುಧವಾರ ಸಂಜೆ ನಗರಕ್ಕೆ ಪ್ರವೇಶಿಸಿದ್ದು, ಗುರುವಾರದ ಪಾದಯಾತ್ರೆ ಆರಂಭಕ್ಕೂ ಮುನ್ನ ವಿಜಯೇಂದ್ರ ಅವರು, ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಿ ದೇಗುಲಕ್ಕೆ ಪಕ್ಷದ ಮುಖಂಡರು, ನಾಯಕರೊಂದಿಗೆ ಭೇಟಿ ನೀಡಿ ವಿಶೇಷ ಪೂಜೆ ಅರ್ಚನೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಯುದ್ಧ ಆರಂಭವಾಗಿದೆ, ರಣರಂಗದಲ್ಲಿ ಗೆಲುವು ನಮ್ಮದೇ, ಮುಂದಿನ ಒಂದೂವರೆ ವರ್ಷ ಜನವಿರೋಧಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ಹೋರಾಟ ಮುಂದುವರೆಯಲಿದೆ.

ಬಿಜೆಪಿ 10 ದಿನಗಳ ಕಾಲ ಹಮ್ಮಿಕೊಂಡಿದ್ದ ಐತಿಹಾಸಿಕ ಬಳ್ಳಾರಿ ಚಲೋ ಪಾದಯಾತ್ರೆ ಇಂದು ಮುಕ್ತಾಯವಾಗಿದೆ.  ಪಾದಯಾತ್ರೆ ಮಾತ್ರ ಮುಕ್ತಾಯವಾಗಿದ್ದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮತ್ತೆ ಆರಂಭವಾಗಲಿದೆ ಎಂದರು. ನಗರದ ಮುನ್ಸಿಪಲ್ ಮೈದಾನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಇದಕ್ಕೆ ಭಾರಿ ಸಂಖ್ಯೆಯಲ್ಲಿ ಜಮಾಯಿಸುವ ಜನರೇ ನಮ್ಮ ಹೋರಾಟಕ್ಕೆ ಸಾಕ್ಷಿಯಾಗಲಿದ್ದಾರೆ. ಇಲ್ಲಿಗೆ ಮೊದಲ ಹಂತರ ಹೋರಾಟ ಮುಕ್ತಾಯವಾಗಲಿದೆ ಎಂದರು.

ಸರ್ಕಾರ ದಿಕ್ಕರಿಸಲಿದ್ದಾರೆ

ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಜನರು ಬೇಸತ್ತಿದ್ದು, ಚುನಾವಣೆಗೆ ಮುನ್ನವೇ ದಿಕ್ಕರಿಸುವ ಮನಸ್ಥಿತಿಗೆ ಜನರು ಬಂದಿದ್ದಾರೆ. ಈ ಸರ್ಕಾರದಿಂದ ಯಾವುದೇ ಪ್ರಯೋಜನ ಇಲ್ಲ ಎಂಬುದು ಜನರಿಗೆ ಮನವರಿಕೆಯಾಗಿದೆ. ಬಡವರು, ದೀನದಲಿತರು, ಮಹಿಳೆಯರು, ಕೂಲಿ ಕಾರ್ಮಿಕರಿಗೆ ಸರ್ಕಾರದಿಂದ ಯಾವುದೇ ಅನುಕೂಲವಾಗಿಲ್ಲ. ನಾನು ಶೇ.90 ಉದ್ಯಮ, ಶೇ.10 ರಷ್ಟು ರಾಜಕಾರಣಿ ಎಂದು ಸಿಎಂ ಹೇಳಿದ್ದಾರೆ. ಅವರ ಮಾತಲ್ಲೇ ಎಲ್ಲ ಅಡಗಿದೆ. ಡಿ.ಕೆ.ಶಿವಕುಮಾರ್ ಅವರಿಗೆ ರಿಯಲ್ ಎಸ್ಟೇಟ್ ವ್ಯವಹಾರ ಮುಖ್ಯವಾಗಿದೆ ಹೊರತು ಜನರ ಕಷ್ಟ ಸುಖಗಳು ಬೇಕಿಲ್ಲ.  ಇಂತಹವರಿಂದ ರಾಜ್ಯದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯನಾ ಎಂದು ಪ್ರಶ್ನಿಸಿದರು. ವಿಶೇಷವಾಗಿ ಉತ್ತರ ಕರ್ನಾಟಕದ ಜ್ವಲಂತ ಸಮಸ್ಯೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಉತ್ತರ ನೀಡಿಲ್ಲ. ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಈ ಸರ್ಕಾರ

ಆದಷ್ಟು ಬೇಗ ಮನೆಗೆ ಹೋಗಲಿದೆ. ಇದನ್ನು ನಾವಲ್ಲ ಜನರೇ ತೀರ್ಮಾನಿಸಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ. ಭ್ರಷ್ಟ, ಜನವಿರೋಧಿ ಸರ್ಕಾರದ ವಿರುದ್ಧ ನಮ್ಮ ಯುದ್ಧ ಆರಂಭವಾಗಿದೆ. ರಣರಂಗದಲ್ಲಿ ಬಿಜೆಪಿಗೆ ಅಪೂರ್ವವಾದ ಜಯ ಸಾಧಿಸಲಿದೆ. ನಮ್ಮ ಗೆಲುವು ತಡೆಯಲು ಡಿಕೆ, ಬಿಕೆ ಯಾರಿಂದಲೂ ಸಾಧ್ಯವಿಲ್ಲ. ಬಿಜೆಪಿಗೆ ಜನಾಶ್ರೀರ್ವಾದ ಸಿಗಲಿದೆ ಎಂದರು.

100 ದಿನಗಳ ಸಾಧನೆ ಶೂನ್ಯ

ಸರ್ಕಾರ 100 ದಿನ ಪೂರೈಸಿದ್ದಕ್ಕೆ ಸಮಾವೇಶ ಮಾಡ್ತಾ ಇದ್ದಾರೆ. ಈ ಸರ್ಕಾರದ ಸಾಧನೆ ಶೂನ್ಯ. ಜನರೇ ಇದನ್ನು ಮನೆಮನೆಯಲ್ಲಿ ಹೇಳುತ್ತಿದ್ದಾರೆ. ಇವರದು ಜನಪ್ರಿಯ ಸರ್ಕಾರ ಅಲ್ಲ. ಜಾಹೀರಾತು ಸರ್ಕಾರ ಎಂದು ವಾಗ್ದಾಳಿ ನಡೆಸಿದ್ದಾರೆ.

ಯಾವುದೇ ಜನಪರ ಕಾರ್ಯಕ್ರಮ ಕೊಟ್ಟಲ್ಲ. ಬಡವರ, ದೀನದಲಿತ ಶೋಷಣೆ ನಿಂತಿಲ್ಲ. ಯುವಕರಿಗೆ ಉದ್ಯೋಗ ನೀಡಿಲ್ಲ. ನುಡಿದಂತೆ ನಡೆಯುತ್ತಿದ್ದೇವೆ ಎಂದು ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ. ಜಾಹೀರಾತು ನೀಡಿದರೆ ಜನರನ್ನು ತಲುಪಬಹುದು ಎಂಬ ಭ್ರಮೆಯಲ್ಲಿ ಈ ಸರ್ಕಾರ ಇದೆ. ಇದಕ್ಕೆಲ್ಲ ಜನರೇ ಮುಂದಿನ ದಿನಗಳಲ್ಲಿ ತಕ್ಕ ಉತ್ತರ, ಪಾಠ ಕಲಿಸಲಿದ್ದಾರೆ ಎಂದರು. 

ಈ ಸಂದರ್ಭದಲ್ಲಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, ಮಾಜಿ ಶಾಸಕ ಗಾಲಿ ಸೋಮಶೇಖರ್ ರೆಡ್ಡಿ, ಎಮ್ಮೆಲ್ಸಿ ವೈ.ಎಂ ಸತೀಶ್, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ, ನಗರ ಅಧ್ಯಕ್ಷ ಜಿ.ವೆಂಕಟರಮಣ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !