ಮಕ್ಕಳನ್ನು ಶಿಸ್ತಾಗಿ ಬೆಳೆಸೋದು ನಮ್ಮ ಜವಾಬ್ದಾರಿ. ಸ್ವಲ್ಪ ವರ್ಷ ಸ್ಟ್ರಿಕ್ಟ್ ಆಗಿ ಇದ್ರೆ ಸಾಕು ಆಮೇಲೆ ಅವರೇ ಜವಾಬ್ದಾರಿಯುತವಾಗಿ ನಡೆದುಕೊಳ್ತಾರೆ ಎಂದುಕೊಂಡ ಪೋಷಕರು ಮಕ್ಕಳನ್ನು ಪ್ರತಿಯೊಂದು ವಿಷಯದಲ್ಲಿಯೂ ತಡೆಯುತ್ತಾರೆ. ಇದನ್ನು ಮಾಡಬೇಡ. ಅದನ್ನು ಮುಟ್ಟಬೇಡ ಹೀಗೆ ಸಾವಿರ ರಿಸ್ಟ್ರಿಕ್ಷನ್ ಹಾಕುತ್ತಾರೆ. ಆದರೆ ಮಕ್ಕಳಿಗೆ ಶಿಸ್ತಿನ ಜೊತೆ ಪ್ರೀತಿಯೂ ಮುಖ್ಯ. ಪ್ರೀತಿ ಹಾಗೂ ಶಿಸ್ತು ಸಮಪ್ರಮಾಣದಲ್ಲಿ ಇದ್ದಾಗ ಮಾತ್ರ ಮಕ್ಕಳ ಬೆಳವಣಿಗೆ ಉತ್ತಮವಾಗಿ ಆಗುತ್ತದೆ. ನಿಮ್ಮ ಮಕ್ಕಳಿಗೆ ಮುದ್ದು ಕಡಿಮೆಯಾಗಿ ಸ್ಟ್ರಿಕ್ಟ್ ಜಾಸ್ತಿ ಆಗಿರೋದನ್ನು ಕಂಡುಹಿಡಿಯೋದು ಹೇಗೆ? ಈ ವಿಷಯಗಳನ್ನು ಗಮನ ಇಟ್ಟು ಓದಿ..
ನಿಮ್ಮ ಮಕ್ಕಳು ತಪ್ಪು ಮಾಡೋದೇ ಇಲ್ಲ. ಇದು ನಿಮಗೆ ಖುಷಿ ಕೊಡುವ ವಿಚಾರ ಆಗಿರಬಹುದು. ಆದರೆ ಮಕ್ಕಳು ಯಾವ ವಯಸ್ಸಿನಲ್ಲಿ ಯಾವ ತಪ್ಪನ್ನು ಮಾಡಬೇಕೋ ಅದನ್ನು ಮಾಡಬೇಕು. ಎಲ್ಲವೂ ಪರ್ಫೆಕ್ಟ್ ಎನ್ನುವಂತೆ ಇದೆ ಎಂದರೆ ಸಮಸ್ಯೆ ತಪ್ಪಿದ್ದಲ್ಲ ಎಂದರ್ಥ. ಮಕ್ಕಳು ತಪ್ಪು ಮಾಡಿದರೆ ಅದನ್ನು ಬಚ್ಚಿಡೋದು ಅಥವಾ ಭಯ ಪಡೋದನ್ನು ಗಮನಿಸಿ.
ಪ್ರತಿಯೊಂದಕ್ಕು ನಿಮ್ಮ ಪರ್ಮಿಷನ್ ಕೇಳುತ್ತಾರೆ. ಅಮ್ಮ ಪೆನ್ಸಿಲ್ ತಗೋಳ್ಲಾ? ಅಮ್ಮ ಇನ್ನೊಂದು ಇಡ್ಲಿ ತಿನ್ಬೋದಾ? ಹೀಗೆ ಸಿಂಪಲ್ ಆದ ನಿರ್ಧಾರಗಳನ್ನೂ ಸ್ವಂತವಾಗಿ ಮಾಡೋದಿಲ್ಲ. ಪ್ರತಿಯೊಂದಕ್ಕೂ ಪೋಷಕರ ಮೇಲೆ ನಿರ್ಧರಿತರಾಗಿರುತ್ತಾರೆ. ಏನನ್ನು ಮುಟ್ಟಿದರೆ ಬೈಸಿಕೊಳ್ಳಬೇಕಾಗುತ್ತದೋ ಎಂದು ಮಕ್ಕಳು ಓವರ್ ಕಾನ್ಶಿಯಸ್ ಆಗಿರುತ್ತಾರೆ.

ನಿಮ್ಮಿಂದ ಹತ್ತಾರು ವಿಷಯಗಳನ್ನು ಮುಚ್ಚಿಡುತ್ತಾರೆ. ವಿಷಯ ಗೊತ್ತಾದ್ರೆ ಒದೆ ಬೀಳುತ್ತದೆ ಅಥವಾ ಬೈಯುತ್ತೀರಿ ಎಂದು ವಿಷಯಗಳನ್ನು ಮುಚ್ಚಿಡೋಕೆ ಆರಂಭಿಸುತ್ತಾರೆ. ಮುಂದೆ ಇದು ಅವರ ಪರ್ಸನಾಲಿಟಿ ಆಗಿಬಿಡುತ್ತದೆ.
ಯಾವ ವಿಷಯಕ್ಕೂ ಉಲ್ಟಾ ಮಾತಾಡೋದೇ ಇಲ್ಲ. ಇದು ಕೂಡ ಸಿಹಿಸುದ್ದಿ ಅಲ್ಲ. ಮಕ್ಕಳಿಗೆ ಇಷ್ಟ ಕಷ್ಟವೇ ಇಲ್ಲ. ಕೊಟ್ಟಿದ್ದನ್ನು ತಿಂತಾರೆ, ಹೇಳಿದ್ದನ್ನು ಮಾಡ್ತಾರೆ ಎಂದರೆ ಅವರಿಗೆ ನಿಮ್ಮ ಬಗ್ಗೆ ಭಯ ಇದೆ ಎಂದರ್ಥ. ನನಗೆ ಸಿಟ್ಟು ಬಂದಿದೆ, ಅಳು ಬರ್ತಿದೆ, ಇದು ಇಷ್ಟವಾಗ್ತಿಲ್ಲ ಅನ್ನೋ ನೆಗೆಟಿವ್ ಫೀಲಿಂಗ್‌ಗಳನ್ನು ಮುಚ್ಚಿಡುತ್ತಾರೆ.
ನಿಮ್ಮನ್ನು ಮೆಚ್ಚಿಸೋದ್ರಲ್ಲೇ ಜೀವನ ಕಳೆಯುತ್ತಾರೆ. ನಾನು ಏನು ಮಾಡಿದ್ರೂ ಅಪ್ಪನಿಗೆ ಇಷ್ಟವಾಗ್ತಾ ಇಲ್ಲ. ನಾನು ಹೇಗೆ ನಡ್ಕೊಂಡ್ರೆ ಇಷ್ಟವಾಗಬಹುದು ಎಂದು ಆಲೋಚಿಸಿ ದೊಡ್ಡವರಿಗೆ ಇಷ್ಟವಾಗುವ ರೀತಿಯಲ್ಲಿ, ತಮಗೆ ಇಷ್ಟವಿಲ್ಲದಿದ್ದರೂ ನಡೆದುಕೊಳ್ತಾರೆ. ಇದು ಅವರಿಗೆ ಮಾನಸಿಕ ಒತ್ತಡ ನೀಡುತ್ತದೆ.

ಮಕ್ಕಳಿಗೆ ಸ್ವಂತ ನಿರ್ಧಾರ ಮಾಡಲು ಆಗೋದಿಲ್ಲ. ನೆಂಟರು ಬಂದಾಗ ಚಾಕೋಲೆಟ್ ಕೊಟ್ಟರೆ ಅದನ್ನು ಇಸ್ಕೋಬೇಕಾ ಅಥವಾ ಬೇಡ್ವಾ? ಮೌನಕ್ಕೆ ಶರಣಾಗೋದು ಬೆಸ್ಟ್ ಅಂದುಕೊಳ್ತಾರೆ. ಬರುಬರುತ್ತಾ ಮಾತು ಕಡಿಮೆ ಮಾಡ್ತಾರೆ. ಶಾಲೆಯಲ್ಲಿ ಏನಾಯ್ತು ಅಂತ ಹೇಳೋದನ್ನು ನಿಲ್ಲಿಸಿಬಿಡ್ತಾರೆ.
ನೆನಪಿರಲಿ, ಮಕ್ಕಳಿಗೆ ಬೌಂಡರಿ, ಶಿಸ್ತು ಎಲ್ಲವೂ ಮುಖ್ಯ. ಕೆಲವು ವಿಷಯಗಳಲ್ಲಿ ಸ್ಟ್ರಿಕ್ಟ್ ಆಗದೇ ಇದ್ರೆ ನೀವು ಫೇಲ್ ಆಗ್ತೀರಿ. ಹಾಗಂತ ಪ್ರತಿಯೊಂದಕ್ಕೂ ಅಡ್ಡ ಬಂದರೆ ಮಕ್ಕಳ ಪರ್ಸನಾಲಿಟಿಗೆ ಹೊಡೆತ ಬೀಳುತ್ತದೆ. ಮುಂದೊಂದು ದಿನ ಸಮಸ್ಯೆ ಬಂದಾಗ ನಮ್ಮನೆಗೆ ಹೇಳಬೇಕು ಸೊಲ್ಯೂಷನ್ ಸಿಗುತ್ತದೆ ಎಂದು ಮಕ್ಕಳು ಯೋಚಿಸಬೇಕು. ಮನೆಯಲ್ಲಿ ಗೊತ್ತಾದ್ರೆ ಕಷ್ಟ ಎಂದು ಅಂದುಕೊಳ್ಳುವುದು ಉತ್ತಮ ಬೆಳವಣಿಗೆ ಅಲ್ಲ.



