ಹೊಸದಿಗಂತ ವರದಿ ಬಳ್ಳಾರಿ:
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ನಡೆದ ಬಳ್ಳಾರಿ ಚಲೋ ಪಾದಯಾತ್ರೆ ವೇಳೆ, ಎರಡು ದಿನಗಳ ಹಿಂದೆ ನಿಧನರಾದ ಬಿಜೆಪಿ ಕಾರ್ಯಕರ್ತರಾದ ಎಸ್.ಬಿ. ತಿಮ್ಮಪ್ಪ ಅವರ ನಿವಾಸಕ್ಕೆ ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಶುಕ್ರವಾರ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದಾರೆ.
ಜಿಲ್ಲಾ ಘಟಕದಿಂದ ಪರಿಹಾರ ವಿತರಿಸಿದರು. ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೊಕ ಅವರು ಮಾತನಾಡಿ, ರಾಯಚೂರು ಜಿಲ್ಲೆಯ ಲಿಂಗಸೂರು ನಿಂದ ಬಳ್ಳಾರಿ ವರೆಗೆ 10 ದಿನಗಳ ಕಾಲ ನಡೆದ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಮ್ಮ ಬಿಜೆಪಿ ಪಕ್ಷದ ಕಾರ್ಯಕರ್ತ ಎಸ್.ಬಿ. ತಿಮ್ಮಪ್ಪ ಅವರು ಅಕಾಲಿಕವಾಗಿ ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ಅತೀವ ದುಃಖವಾಗಿದೆ. ಮಾಜಿ ಸಚಿವ, ಗಂಗಾವತಿ ಶಾಸಕ ಗಾಲಿ ಜನಾರ್ಧನ ರೆಡ್ಡಿ ಅವರೊಂದಿಗೆ ಮೃತರ ನಿವಾಸಕ್ಕೆ ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಜಿಲ್ಲಾ ಘಟಕದಿಂದ ಪರಿಹಾರ ವಿತರಿಸಲಾಯಿತು ಎಂದರು.
ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಮಾತನಾಡಿ, ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಪಕ್ಷದ ಅತ್ಯಂತ ನಿಷ್ಠಾವಂತ ಕಾರ್ಯಕರ್ತ ಎಸ್.ಬಿ. ತಿಮ್ಮಪ್ಪ ಅವರು ಅಕಾಲಿಕವಾಗಿ ನಿಧನರಾಗಿರುವುದು ಅತೀವ ದುಃಖ ತರಿಸಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ, ನೆಮ್ಮದಿಯನ್ನು ನೀಡಲಿ, ಅವರ ಕುಟುಂಬದ ಸದಸ್ಯರಿಗೆ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲಿ ಎಂದರು. ಅವರ ಕುಟುಂಬದೊಂದಿಗೆ ನಾವಿದ್ದೇವೆ, ಚಿಂತೆ ಬೇಡ, ಎಂದು ಕುಟುಂಬದ ಸದಸ್ಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದೆ. ಜೊತೆಗೆ ಬಿಜೆಪಿ ಜಿಲ್ಲಾ ಘಟಕದಿಂದ ಪರಿಹಾರವನ್ನು ನೀಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಜನಾರ್ಧನ ರೆಡ್ಡಿ ಅವರ ಪತ್ನಿ, ಲಕ್ಷ್ಮಿ ಅರುಣಾ, ಮುಖಂಡರಾದ ಓಬಳೇಶ್, ಮಲ್ಲಿಕಾರ್ಜುನ, ಮಹೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



