September 11, 2026
Friday, September 11, 2026
spot_img

ನಿಡಗುಂದಿಯಲ್ಲಿ ಎಟಿಎಂ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅರೆಸ್ಟ್‌: 3.60 ಲಕ್ಷ ರೂಪಾಯಿ ಜಪ್ತಿ

ಹೊಸದಿಗಂತ ವರದಿ ವಿಜಯಪುರ:

ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದ ಬಳಿಯ 19.29 ಲಕ್ಷ ರೂ. ಸಂಗ್ರಹದ ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ್ದಂತೆ, ಅಂತರ್ ರಾಜ್ಯ ಮೂವರು ಆರೋಪಿಗಳನ್ನು ಬಂಧಿಸಿ, 3.60 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಯಾಣದ ಪಾಲವಾಲ್ ಜಿಲ್ಲೆಯ ಧಿರಂಕಿ ಗ್ರಾಮದ ಸಾಹಿಲ್ ಮೆಹಮೂದ್ (24), ಉತ್ತರ ಪ್ರದೇಶದ ಮುಂಡಾಳಿ ಠಾಣೆ ವ್ಯಾಪ್ತಿಯ ಸಪೀಯಾಬಾದ್ ಲೌಟಿ ಗ್ರಾಮದ ಕಮರಿಯಾಬ್ ಸತ್ತಾರ್ (50) ಹಾಗೂ ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಬಿಝೋಲಿ ಗ್ರಾಮದ ಆಕಾಶ ಪ್ರದೀಪ ತ್ಯಾಗಿ (27) ಬಂಧಿತ ಆರೋಪಿಗಳು ಎಂದರು.

ಕಳೆದ ಸೆ.2 ರಂದು ರಾತ್ರಿ ಸುಮಾರು 2.30ರ ವೇಳೆಗೆ ವಿಜಯಪುರ- ಆಲಮಟ್ಟಿ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಗೊಳಸಂಗಿ ಗ್ರಾಮದ ಕೆನರಾ ಬ್ಯಾಂಕ್ ಎಟಿಎಂನ ಶೆಟರ್‌ಗೆ ಹಾಕಿದ್ದ ಬೀಗವನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಒಳನುಗ್ಗಿದ ಕಳ್ಳರು, ಎಟಿಎಂ ಯಂತ್ರದ ಸೇಫ್ ಡೋರ್‌ನ್ನೂ ಗ್ಯಾಸ್ ಕಟರ್‌ನಿಂದ ಕತ್ತರಿಸಿ, ಅದರಲ್ಲಿದ್ದ 19,29,000 ನಗದನ್ನು ಹಣ ಇಡುವ ಕ್ಯಾಸೆಟ್ ಸಮೇತ ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಸಂಬಂಧ ಕೂಡಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಎಂದರು.

ಈ ಘಟನೆಗೆ ಸಂಬಂಧಿಸಿದಂತೆ ನಾಲ್ಕು ಪ್ರತ್ಯೇಕ ತನಿಖಾ ತಂಡಗಳನ್ನು ರಚಿಸಲಾಗಿತ್ತು. ತನಿಖಾ ತಂಡಗಳು ಘಟನಾ ಸ್ಥಳ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಸಿಸಿಟಿವಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಪರಿಶೀಲಿಸಿದಾಗ, ಶಂಕಾಸ್ಪದ ವಾಹನವೊಂದು ಮಧ್ಯಪ್ರದೇಶದತ್ತ ತೆರಳಿರುವುದು ಪತ್ತೆಯಾಯಿತು. ಮಧ್ಯಪ್ರದೇಶದ ಧಾರ್ ಜಿಲ್ಲೆಯ ಕಾನ್ವಾಯ್ ಪೊಲೀಸ್ ಠಾಣೆ ಪೊಲೀಸರು ಸೆ.3 ರಂದು ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯ ಘಾಟಾ- ನಾಗದಾ- ನಿಮಾಚ್ ಟೋಲ್‌ನಾಕಾ ಬಳಿ ರಾತ್ರಿ ಗಸ್ತಿನಲ್ಲಿದ್ದಾಗ ಶಂಕಿತ ಸ್ಕಾರ್ಪಿಯೊ ವಾಹನ ಹಾಗೂ ಅದರಲ್ಲಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಜಯಪುರ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ವಿಜಯಪುರ ಜಿಲ್ಲೆಯ ತನಿಖಾ ತಂಡ ಸೆ.4 ರಂದು ಮಧ್ಯಪ್ರದೇಶಕ್ಕೆ ತೆರಳಿ ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.

ಬಂಧಿತ ಆರೋಪಿಗಳಿಂದ 3.60 ಲಕ್ಷ ರೂ. ನಗದು, ಸ್ಕಾರ್ಪಿಯೊ ವಾಹನ, ಒಂದು ಸ್ಕ್ರೂಡ್ರೈವರ್ ಹಾಗೂ ಗ್ಯಾಸ್ ಕಟರ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ತಿಳಿದುಬಂದಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದರು.

ಪೊಲೀಸ್ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಇದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !